ADVERTISEMENT

ಕ್ಯಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಗೆ ಆರ್ಥಿಕ ನೆರವು

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 17:57 IST
Last Updated 23 ಜನವರಿ 2021, 17:57 IST

ಯಲಹಂಕ: ಕ್ಯಾನ್ಸರ್‌ನಿಂದ ಬಳಲುತ್ತಿರುವ ಐವರು ಮಕ್ಕಳಿಗೆ ತಿಂಗಳೊಳಗೆ ಚಿಕಿತ್ಸೆ ನೀಡಲು ‘ಸೈಟ್‌ಕೇರ್’ ಆಸ್ಪತ್ರೆ, ವಿದ್ಯಾಶಿಲ್ಪ ಅಕಾಡೆಮಿ ಹಾಗೂ ಹ್ಯೂಮನಿಸ್ಟ್‌ ಸೆಂಟರ್‌ ಫಾರ್ ಮೆಡಿಸಿನ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ಕ್ಯಾನ್ಸರ್ ಪೀಡಿತ ಮಕ್ಕಳಲ್ಲಿ ಹೊಸ ಚೈತನ್ಯ ಹಾಗೂ ಅವರ ಭವಿಷ್ಯವನ್ನು ರೂಪಿಸಲು ಈ ಸಂಸ್ಥೆಗಳು ಮುಂದಾಗಿದ್ದು, ಈ ವರ್ಷದ ಅಂತ್ಯದೊಳಗೆ ಇಂತಹ 50 ಮಕ್ಕಳ ಚಿಕಿತ್ಸೆ ನೆರವು ನೀಡುವ ಉದ್ದೇಶ ಹೊಂದಿದೆ.

ವಿದ್ಯಾಶಿಲ್ಪ ಅಕಾಡೆಮಿಯ ಪ್ರಾಚಾರ್ಯರಾದ ಕಲೈ ಸೆಲ್ವಿ, ‘ಸಂಸ್ಥೆಯಲ್ಲಿ ವಿಎಸ್ಎ ಕ್ಯಾನ್ಸರ್ ಕೇರ್ ನಿಧಿ ಆರಂಭಿಸಲಾಗಿದೆ. ಇದಲ್ಲದೆ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ರೋಗ ಪೀಡಿತರ ಚಿಕಿತ್ಸೆಗೆ ಆರಂಭಿಕವಾಗಿ ಹಣ ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದರು.

ADVERTISEMENT

ಹ್ಯೂಮನಿಸ್ಟ್ ಸೆಂಟರ್ ಫಾರ್ ಮೆಡಿಸಿನ್ ಸಹ ಸಂಸ್ಥಾಪಕ ಡಾ.ಜೋಗಿನ್, ‘ದೇಶದಲ್ಲಿ ಪ್ರತಿವರ್ಷ ಸುಮಾರು 50 ಸಾವಿರ ಮಕ್ಕಳು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಪೈಕಿ ಶೇ 50ರಷ್ಟು ಮಕ್ಕಳಿಗೆ ಪೋಷಕರ ಹಣಕಾಸಿನ ಕೊರತೆಯಿಂದಾಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಸಾವಿಗೀಡಾಗುತ್ತಿದ್ದಾರೆ’ ಎಂದು ತಿಳಿಸಿದರು.

‘ಮಕ್ಕಳಲ್ಲಿ ಕ್ಯಾನ್ಸರ್ ಗುಣಪಡಿಸುವ ಪ್ರಮಾಣ ಹೆಚ್ಚಾಗಿದ್ದು, ಆರಂಭಿಕ ಹಂತದಲ್ಲಿ ರೋಗವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಜೀವ ಉಳಿಸಬಹುದಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.