ADVERTISEMENT

‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದಿಂದ ಪಾಲಿಕೆಗಳಿಗೆ ಆರ್ಥಿಕ ಬಲ: ವಿ. ರವಿಚಂದರ್‌

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 23:51 IST
Last Updated 22 ಮಾರ್ಚ್ 2025, 23:51 IST
ವಿ. ರವಿಚಂದರ್
ವಿ. ರವಿಚಂದರ್   

ಬೆಂಗಳೂರು: ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ–2024’ಯಂತೆ ರಚನೆಯಾಗುವ ನಗರ ಪಾಲಿಕೆಗಳಿಗೆ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದಿಂದ (ಜಿಬಿಎ) ಆರ್ಥಿಕ ಬಲ ಬರಲಿದೆ. ಸಂಪನ್ಮೂಲದ ಕೊರತೆಯಿರುವ ನಗರ ಪಾಲಿಕೆಗಳಿಗೆ ಹೆಚ್ಚು ಅನುದಾನ ಸಿಗಲಿದೆ’ ಎಂದು ಬಿಬಿಎಂಪಿ ಸುಧಾರಣಾ ಸಮಿತಿಯ (ಬ್ರ್ಯಾಂಡ್‌ ಬೆಂಗಳೂರು ಸಮಿತಿ) ಸದಸ್ಯ ವಿ. ರವಿಚಂದರ್‌ ತಿಳಿಸಿದರು.

‘ನಮ್ಮ ಸಮಿತಿಯಿಂದ ನೀಡಲಾಗಿರುವ ಬಹುತೇಕ ಸಲಹೆಗಳನ್ನು ಮಸೂದೆಯಲ್ಲಿ ಸೇರಿಸಲಾಗಿದೆ. ಸಂವಿಧಾನದ 74ನೇ ತಿದ್ದುಪಡಿಯ ಆಶಯವನ್ನು ಕಡೆಗಣಿಸಲಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಸಂವಿಧಾನದ ಆಶಯದಂತೆಯೇ ನಾವು ಮಸೂದೆಯ ಕರಡನ್ನು ಸಿದ್ಧಪಡಿಸಿದ್ದೇವೆ. ಈ ಬಗ್ಗೆ ರಾಜ್ಯಪಾಲರು ಅಥವಾ ನ್ಯಾಯಾಲಯಗಳು ಸ್ಪಷ್ಟತೆ ನೀಡಬಹುದು’  ಎಂದರು.

‘ನಗರ ಪಾಲಿಕೆಗಳ ಯಾವುದೇ ಆರ್ಥಿಕ ಸಂಪನ್ಮೂಲದ ಸಂಗ್ರಹದ ಮೇಲೆ ಜಿಬಿಎ ನಿಯಂತ್ರಣ ಇರುವುದಿಲ್ಲ. ನಗರ ಪಾಲಿಕೆಗಳ ವ್ಯಾಪ್ತಿಯ ಆಸ್ತಿ ತೆರಿಗೆ, ಜಾಹೀರಾತು ತೆರಿಗೆಗಳೆಲ್ಲವೂ ಆಯಾ ಪಾಲಿಕೆಗಳೇ ಸಂಗ್ರಹಿಸುತ್ತವೆ. ಜಿಬಿಎಯಡಿಯ ಪಾಲಿಕೆಗಳಲ್ಲಿ ಕೆಲವು ಪಾಲಿಕೆಗಳಲ್ಲಿ ಆರ್ಥಿಕ ಕೊರತೆ ಉಂಟಾದರೆ, ಅಂತಹ ಪಾಲಿಕೆಗಳಿಗೆ ಕೇಂದ್ರ ಹಾಗೂ ರಾಜ್ಯದ ಅನುದಾನದಲ್ಲಿ ಹೆಚ್ಚಿನ ಪಾಲನ್ನು ನೀಡಬಹುದಾಗಿದೆ’ ಎಂದು ತಿಳಿಸಿದರು.

ADVERTISEMENT

‘ನಗರದ ಅಭಿವೃದ್ಧಿ ಯೋಜನೆಯನ್ನು ರೂಪಿಸುವ ಅಧಿಕಾರಿ ಜಿಬಿಎಗೆ ಇರಲಿದ್ದು, ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದೆ. ಮೂಲಸೌಕರ್ಯ ಮತ್ತು ಇತರೆ ಯೋಜನೆಗಳನ್ನು ಸಮನ್ವಗೊಳಿಸುವುದು ಮತ್ತು ನಿರ್ವಹಿಸುವುದೂ ಜಿಬಿಎ ಜವಾಬ್ದಾರಿಯಾಗಿರುತ್ತದೆ. ಜಿಬಿಎಗೆ ಆರ್ಥಿಕ ಸಾಮರ್ಥ್ಯ ಇಲ್ಲದಿದ್ದರೆ ಅದಕ್ಕೆ ಮನ್ನಣೆ ಇರುವುದಿಲ್ಲ. ಹೀಗಾಗಿ, ಅನುದಾನಗಳನ್ನು ಜಿಬಿಎ ನಿರ್ವಹಣೆ ಮಾಡುತ್ತದೆ’ ಎಂದು ಹೇಳಿದರು.

ಪಂಚಾಯಿತಿಗಳನ್ನು ಸೇರಿಸಬೇಡಿ

'ಗ್ರೇಟರ್ ಬೆಂಗಳೂರು ಮಾಡುವುದು ಒಳ್ಳೆಯದೇ. ಆದರೆ ಹಲವು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯಿತಿಗಳನ್ನು ಸೇರಿಸಿಕೊಂಡು ಗ್ರೇಟರ್ ಬೆಂಗಳೂರು ಮಾಡುತ್ತಿರುವುದು ಸರಿಯಲ್ಲ. ಏಕೆಂದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಹಲವು ಸಮಸ್ಯೆ ಮತ್ತು ಅನನುಕೂಲಗಳು ಇರುವುದರಿಂದ ಹೊಸದಾಗಿ ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಂಡು ಅಭಿವೃದ್ಧಿ ಮಾಡುವು‌ದು ಕಷ್ಟ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಲಲಿತವಾಗಿ ಆಡಳಿತ ಮತ್ತು ಕೆಲಸ ಕಾರ್ಯಗಳು ಆಗಬೇಕು ಅಂದರೆ, ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ ಗ್ರಾಮ ಪಂಚಾಯಿತಿಗಳನ್ನು ಸೇರಿಸಬಾರದು. ಬಿಬಿಎಂಪಿ ವ್ಯಾಪ್ತಿಯನ್ನೇ ವಿಭಜನೆ ಮಾಡಿ ಹೊಸ ಆಡಳಿತ ರಚನೆ ಮಾಡಲಿ.

ಲಿಂಗಧ್ರುವ ಎನ್, ಚುಂಚನಗುಪ್ಪೆ, ಯಶವಂತಪುರ

ಲಿಂಗಧ್ರುವ ಎನ್

ಬಿಬಿಎಂಪಿಯನ್ನು ಬಲಿಷ್ಠಗೊಳಿಸಿ

ಅಸ್ತಿತ್ವದಲ್ಲಿರುವ ಬಿಬಿಎಂಪಿಯನ್ನು ಬಲಿಷ್ಠಗೊಳಿಸಿ, ಭ್ರಷ್ಟಾಚಾರ ಮುಕ್ತವಾಗಿಸಿ. ಹೊಸದಾಗಿ ಪಾಲಿಕೆಗಳನ್ನು ರಚಿಸಿ ಕಾರ್ಯಗತಗೊಳಿಸುವ ಹೊತ್ತಿಗೆ ಈ ಸರ್ಕಾರದ ಅವಧಿಯೇ ಮುಗಿದು ಹೋಗಿರುತ್ತದೆಯೇನೋ? ಅಲ್ಲದೆ, ಇದರಿಂದ ಸಾರ್ವಜನಿಕರಿಗೆ ಏನೆಲ್ಲಾ ಅನುಕೂಲವಾಗುತ್ತದೆ ಎಂಬ ಮಾಹಿತಿಯ ಸ್ಪಷ್ಟತೆಯೂ ಇಲ್ಲ.

ಪುಷ್ಪಾ ಶ್ರೀರಾಂ, ವಸಂತಪ್ಪ ಬ್ಲಾಕ್, ಪ್ಯಾಲೇಸ್ ಗುಟ್ಟಹಳ್ಳಿ

ಪುಷ್ಪಾ ಶ್ರೀರಾಂ

ಮೊದಲು ಚುನಾವಣೆ ಮಾಡಿ

ಸಂವಿಧಾನದ ಮೇಲೆ ನಂಬಿಕೆ, ಗೌರವ ಇದ್ದರೆ ಬೆಂಗಳೂರನ್ನು ಅಧಿಕಾರಗಳ ಹಿಡಿತದಿಂದ ಮುಕ್ತಗೊಳಿಸಿ. ಸರ್ಕಾರ, ನಗರವನ್ನು ‘ಗ್ರೇಟರ್’ ಮಾಡುತ್ತದೋ, ಜೇಬಿಗೆ ಗ್ರೇಟರ್ ಮಾಡಿಕೊಳ್ಳುತ್ತದೋ, 243 ವಾರ್ಡೋ, 225 ವಾರ್ಡೋ, ಅದಿಲ್ಲದಿದ್ದರೆ ಈಗಿರುವ 198 ವಾರ್ಡ್‌ಗೇ ಮೊದಲು ಚುನಾವಣೆ ನಡೆಸಲಿ.

ಎಸ್. ಕುಮಾರ್ ಪದ್ಮಶಾಲಿ, ತೋಟದೇವರಗಲ್ಲಿ, ಕಾಟನ್ ಪೇಟೆ

ಕುಮಾರ್ ಪದ್ಮಶಾಲಿ

ಸಂವಿಧಾನದ ಉಲ್ಲಂಘನೆ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮೇಲ್ನೋಟಕ್ಕೆ ಸಂವಿಧಾನದ 73ನೇ ಮತ್ತು 74ನೇ ತಿದ್ದುಪಡಿಗಳ ಅಧಿಕಾರ ವಿಕೇಂದ್ರೀಕರಣ ತತ್ವದ ಉಲ್ಲಂಘನೆ ಎಂದು ಭಾವಿಸುತ್ತೇನೆ. ಬೆಂಗಳೂರು ಮಹಾನಗರ ಅಗಾಧ ಪ್ರಮಾಣದಲ್ಲಿ ಬೆಳೆದಿದೆ. ಅದಕ್ಕೆ ಇನ್ನೂ ಕೆಲ ನಗರ ಪಾಲಿಕೆಗಳನ್ನು ಹೆಚ್ಚಳ ಮಾಡಿ, ಚುನಾಯಿತ ಪ್ರತಿನಿಧಿಗಳಿಗೆ ಇನ್ನು ಹೆಚ್ಚಿನ ಅಧಿಕಾರ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇಡಬಹುದು.

ಭೀಮಾ ನಾಯಕ

ಭೀಮಾ ನಾಯಕ, ಗೋವಿಂದರಾಜನಗರ

ಗೊಂದಲದ ಗೂಡಾಗುವ ಸಂಶಯ

ಚಿಕ್ಕದಿದ್ದರೆ ಚೊಕ್ಕ ಎನ್ನುವ ಹಾಗೆ, ಆಡಳಿತ ಸುಲಲಿತವಾಗಿ, ಪ್ರಗತಿಗೆ ಪೂರಕವಾಗಿ ಸಾಗಲು ಈಗಿರುವ ಬಿಬಿಎಂಪಿ ಮುಂದುವರಿಯುವುದು ಒಳ್ಳೆಯದು. ಇನ್ನುಳಿದ ಪ್ರದೇಶಗಳ ಅಭಿವೃದ್ಧಿಗೆ ಆಯಾ ಪ್ರದೇಶದ ಸ್ವಾಯತ್ತ ಸಂಸ್ಥೆಗಳನ್ನು ಬೆಂಬಲಿಸಿ, ಬಲಪಡಿಸಬೇಕು. ಕೇವಲ ಬದಲಾವಣೆ, ಘೋಷಣೆಗಳಿಂದ ಅಭಿವೃದ್ಧಿ ಆಗುವುದಿಲ್ಲ. ನಾಗರಿಕ ಕೇಂದ್ರೀಕೃತ ಮೂಲ ಸೌಕರ್ಯಗಳನ್ನು ಒದಗಿಸಲು ಹೆಚ್ಚು ಆಸ್ಥೆ ವಹಿಸುವುದು ಅಗತ್ಯ. ಜನಪರ ಕಾಳಜಿ ಇರದ ಗ್ರೇಟರ್ ಬೆಂಗಳೂರು ವ್ಯವಸ್ಥೆ ಗೊಂದಲದ ಗೂಡಾಗುವ ಸಂಶಯ ಮೂಡುತ್ತಿದೆ.

ದಾನಪ್ಪ ಎಂ.ಸಿ

ದಾನಪ್ಪ ಎಂ.ಸಿ, ವಕೀಲ, ಜ್ಞಾನಭಾರತಿ ರಸ್ತೆ

‘ಗ್ರೇಟರ್‌ ಬೆಂಗಳೂರು’: ನೀವೇನನ್ನುತ್ತೀರಿ?
ರಾಜ್ಯ ಸರ್ಕಾರ ‘ಗ್ರೇಟರ್‌ ಬೆಂಗಳೂರು ಆಡಳಿತ ಮಸೂದೆ– 2024’ ಮೂಲಕ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಿ, ಅದರಡಿ ನಗರಪಾಲಿಕೆಗಳನ್ನು ರಚಿಸಲು ಮುಂದಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ‘ಪ್ರಜಾವಾಣಿ’ಗೆ ಕಳುಹಿಸಬಹುದು. ನಿಮ್ಮ ಹೆಸರು, ವಿಳಾಸ ಹಾಗೂ ಭಾವಚಿತ್ರದೊಂದಿಗೆ ವಾಟ್ಸ್‌ ಆ್ಯಪ್‌ಗೆ ಕಳುಹಿಸಿ. 96060 38256

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.