ADVERTISEMENT

ನಟ, ನಿರ್ದೇಶಕಿ ವಿರುದ್ಧ ಎಫ್‌ಐಆರ್‌

ದೂರು ದಾಖಲಿಸಿಕೊಳ್ಳದೆ ಪೊಲೀಸರ ನಿರ್ಲಕ್ಷ್ಯ * ಪೊಲೀಸ್‌ ಕಮಿಷನರ್‌ಗೆ ದೂರು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 19:14 IST
Last Updated 29 ಸೆಪ್ಟೆಂಬರ್ 2019, 19:14 IST

ಬೆಂಗಳೂರು: ಪಾರ್ಕಿಂಗ್ ವಿಚಾರದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ನಟ ನಿಹಾಲ್ ರಜಪೂತ್ ಮತ್ತು ನಿರ್ದೇಶಕಿ ರಿಷಿಕಾ ಅವರ ವಿರುದ್ಧ ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ. 19ರಂದು ಘಟನೆ ನಡೆದಿದ್ದು, ಹರ್ಷ ಸ್ವರೂಪ್‌ ಎಂಬುವವರು ಹಲ್ಲೆಗೆ ಒಳಗಾಗಿದ್ದರು. ಈ ಬಗ್ಗೆ ಹರ್ಷ ಅವರು ಠಾಣೆಗೆ ದೂರು ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರಲಿಲ್ಲ. ಅದರ ಬದಲು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಸಲಹೆ ನೀಡಿದ್ದರು. ಇದರಿಂದ ನೊಂದಿದ್ದ ಹರ್ಷ, ಇಡೀ ಘಟನೆಯ ಬಗ್ಗೆ ವಿವರಿಸಿ, ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ದೂರು ನೀಡಿದ್ದರು. ಕಮಿಷನರ್ ಸೂಚನೆಯಂತೆ ದೂರು ದಾಖಲಾಗಿದೆ.

ಜಗಳದ ವೇಳೆ ಹರ್ಷ ಕೂಡಾ ಅವಾಚ್ಯವಾಗಿ ನಿಂದಿಸಿದ್ದಾಗಿ ರಿಷಿಕಾ ಪ್ರತಿದೂರು ನೀಡಿದ್ದಾರೆ. ಅದರಂತೆ ಪೊಲೀಸರು, ಹರ್ಷ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

ಏನು ಜಗಳ: ಬೈಕ್ ಪಾರ್ಕಿಂಗ್ ಜಾಗಕ್ಕಾಗಿ ಹರ್ಷ ಮತ್ತು ರಿಷಿಕಾ ನಡುವೆ ಜಗಳ ನಡೆದಿತ್ತು. ಜಗಳ ನಡೆಯುವಾಗ ನಟ ನಿಹಾಲ್‍ಗೆ ರಿಷಿಕಾ ಕರೆ ಮಾಡಿ ವಿಷಯ ತಿಳಿಸಿದ್ದರು. ಹರ್ಷ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದನಿಹಾಲ್ ಅದೇ ದಿನ ರಾತ್ರಿ ಸ್ನೇಹಿತರ ಜತೆಗೆ ಹೋಗಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ ಹರ್ಷ, ಅವರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಆದರೂ ಹರ್ಷ ಅವರಿಂದ ಪೊಲೀಸರು ದೂರು ಸ್ವೀಕರಿಸಿರಲಿಲ್ಲ. ಹೀಗಾಗಿ ಹರ್ಷ, ‘ಹಲ್ಲೆ ನಡೆಸಿದ ನಿಹಾಲ್‌ ಮತ್ತು ಸ್ನೇಹಿತರು ಕೊಲೆ ಮಾಡುವುದಾಗಿ ಬೆದರಿಸಿದ್ದರು’ ಎಂದು ಆರೋಪಿಸಿ ಕಮಿಷನರ್‌ಗೆ ಇ-ಮೇಲ್ ಮಾಡಿದ್ದರು. ಹರ್ಷ ಆರೋಪವನ್ನು ಗಂಭೀರವಾಗಿ ಪರಿಗಣಿಸಿd ಕಮಿಷನರ್‌, ದೂರು ದಾಖಲಿಸಿಸಲು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.