ADVERTISEMENT

ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌

ಕಾಮಗಾರಿ ಗುತ್ತಿಗೆ ಪಡೆಯಲು ಸುಳ್ಳು ದಾಖಲೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 20:16 IST
Last Updated 18 ಆಗಸ್ಟ್ 2020, 20:16 IST

ಬೆಂಗಳೂರು: ‘ಬಿಬಿಎಂಪಿಯ ಕಾಮಗಾರಿ ಗುತ್ತಿಗೆ ಪಡೆಯಲು ಸುಳ್ಳು ದಾಖಲೆ ನೀಡಿರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು. ತಪ್ಪಿತಸ್ಥ ಗುತ್ತಿಗೆದಾರರು ಹಾಗೂ ಈ ಅಕ್ರಮಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

ಸುಳ್ಳು ದಾಖಲೆ ನೀಡಿ ಗುತ್ತಿಗೆ ಪಡೆದ ಪ್ರಕರಣಗಳ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌ ) ಅವರಿಗೆ‘ಮೇಯರ್‌ ಅವರು ಪತ್ರ ಬರೆದ ವಿಚಾರಕ್ಕೆ ಕೌನ್ಸಿಲ್‌ ಸಭೆಯಲ್ಲಿ ಪ್ರತಿಕ್ರಿಯಿಸಿದ ಅವರು, ‘ ಈ ಕುರಿತ ದಾಖಲೆಗಳನ್ನು ಒದಗಿಸುವಂತೆ ಮೇಯರ್‌ ಅವರನ್ನೂ ಕೋರಿದ್ದೇನೆ. ಈ ರೀತಿ ಗುತ್ತಿಗೆ ಪಡೆಯುವವರು ಕಳಪೆ ಕಾಮಗಾರಿ ನಡೆಸುತ್ತಾರೆ. ಇಂತಹ ಕೃತ್ಯ ಗಳನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಮೇಯರ್‌ ಅವರು ಐದು ವಿಧಾನ ಸಭಾ ಕ್ಷೇತ್ರಗಳಲ್ಲಿನ ಅಕ್ರಮಗಳ ಬಗ್ಗೆ ಮಾತ್ರ ದಾಖಲೆ ನೀಡಿದ್ದಾರೆ. ಇಂತಹ ಕೃತ್ಯ ಎಲ್ಲ ಕ್ಷೇತ್ರಗಳಲ್ಲೂ ನಡೆದಿವೆ. ಎಲ್ಲ ಕ್ಷೇತ್ರಗಳ ಗುತ್ತಿಗೆಯನ್ನು ಮತ್ತೆ ಪರಿಶೀಲನೆಗೆ ಒಳಪಡಿಸಬೇಕು’ ಎಂದು ಬಿಜೆಪಿಯ ಪದ್ಮನಾಭ ರೆಡ್ಡಿ ಒತ್ತಾಯಿಸಿದರು.

ADVERTISEMENT

ಮೇಯರ್‌ ಅವರು ಎಸಿಎಸ್‌ಗೆ ಬರೆದ ಪತ್ರದ ಬಗ್ಗೆ ‘ಪ್ರಜಾವಾಣಿ’ಯ ವರದಿಯನ್ನು ಉಲ್ಲೇಖಿಸಿದ ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜಿದ್, ‘ನಿಮಗೆ ಆಡಳಿತ ನಡೆಸಲು ಬರುವುದಿಲ್ಲ. ನಿಮ್ಮ ಅವಧಿಯಲ್ಲಿ ಉದ್ದಕ್ಕೂ ಹಗರಣಗಳೇ ನಡೆದಿವೆ. ಈಗ ವೇ–ಫೈಂಡರ್‌ ಅಳವಡಿಕೆ ಹಾಗೂ ಕಸ ಗುಡಿಸುವ ಯಂತ್ರ ಖರೀದಿ ವಿಚಾರದಲ್ಲೂ ಅಕ್ರಮ ನಡೆಸಲಾಗುತ್ತಿದೆ’ ಎಂದು ಆರೋಪಿಸಿದರು.

‘ಪೈಥಾನ್‌ ಯಂತ್ರ: ₹5.36 ಕೋಟಿ ಹೆಚ್ಚುವರಿ ಪಾವತಿ’
‘ರಸ್ತೆಗಳ ಗುಂಡಿ ಮುಚ್ಚಲು ಪಾಲಿಕೆ ಈ ಹಿಂದೆ ಪೈಥಾನ್‌ ಯಂತ್ರ ಖರೀದಿಸಿದಾಗ ₹ 5.36 ಕೋಟಿ ಹೆಚ್ಚುವರಿ ಪಾವತಿ ಮಾಡಿರುವುದು ಟಿವಿಸಿಸಿ ತನಿಖೆಯಿಂದ ದೃಢಪಟ್ಟಿದೆ’ ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ತಿಳಿಸಿದರು.

ಕೌನ್ಸಿಲ್‌ ಸಭೆಯ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.