ADVERTISEMENT

ಪಂಚೆ ಧರಿಸಿ ಬಂದಿದ್ದ ರೈತನಿಗೆ ಪ್ರವೇಶ ನಿರಾಕರಣೆ: GT ಮಾಲ್‌ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 12:55 IST
Last Updated 18 ಜುಲೈ 2024, 12:55 IST
<div class="paragraphs"><p>ಜಿ.ಟಿ ಮಾಲ್ ಎದುರು ಪ್ರತಿಭಟನಕಾರರು&nbsp;ಜಮಾಯಿಸಿದ್ದರು</p></div>

ಜಿ.ಟಿ ಮಾಲ್ ಎದುರು ಪ್ರತಿಭಟನಕಾರರು ಜಮಾಯಿಸಿದ್ದರು

   

ಬೆಂಗಳೂರು: ಪಂಚೆ ಧರಿಸಿ ಬಂದಿದ್ದ ಹಾವೇರಿ ಜಿಲ್ಲೆಯ ರೈತ ಫಕೀರಪ್ಪ ಅವರಿಗೆ ಪ್ರವೇಶ ನಿರಾಕರಿಸಿದ್ದ ಆರೋಪದಡಿ ಮಾಗಡಿ ರಸ್ತೆಯ ಜಿ.ಟಿ ವರ್ಲ್ಡ್‌ ಮಾಲ್‌ ಮಾಲೀಕರು ಹಾಗೂ ಭದ್ರತಾ ಸಿಬ್ಬಂದಿ ಅರುಣ್‌ ವಿರುದ್ಧ ಕೆಪಿ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಗುರುವಾರ ಎಫ್‌ಐಆರ್‌ ದಾಖಲಾಗಿದೆ.

‍‘ಧರ್ಮರಾಜ್‌ ಗೌಡ ಎಂಬುವವರು ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಕಾನೂನು ಪ್ರಕಾರ ನೋಟಿಸ್‌ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಲಾಗುವುದು’ ಎಂದು ಪೊಲೀಸರು ಹೇಳಿದರು.

ADVERTISEMENT

ಪಂಚೆ ಧರಿಸಿ ಬಂದಿದ್ದ ಫಕೀರಪ್ಪ ಅವರನ್ನು ತಡೆದು ನಿಲ್ಲಿಸಿ ಅವಮಾನ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಹಾಗೂ ಮಾಲೀಕರು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಲಾಗಿದೆ.

ನಾಗರಾಜ್‌ ಅವರು ತಮ್ಮ ತಂದೆ ಫಕೀರಪ್ಪ ಅವರಿಗೆ ಮಾಲ್‌ನಲ್ಲಿ ‘ಕಲ್ಕಿ’ ಸಿನಿಮಾ ತೋರಿಸಲು ಜಿ.ಟಿ ವರ್ಲ್ಡ್‌ ಮಾಲ್‌ಗೆ ಮಂಗಳವಾರ ಸಂಜೆ ಕರೆದುಕೊಂಡು ಬಂದಿದ್ದರು. ಫಕೀರಪ್ಪ ಅವರು ಪಂಚೆ ಧರಿಸಿ ತಲೆಗೆ ಟವಲ್‌ನಿಂದ ಪೇಟ ಸುತ್ತಿಕೊಂಡಿದ್ದರು. ಮಾಲ್‌ನ ಭದ್ರತಾ ಸಿಬ್ಬಂದಿ, ಪ್ರವೇಶ ದ್ವಾರದಲ್ಲೇ ತಡೆದು ಪ್ರವೇಶ ನಿರಾಕರಿಸಿದ್ದರು. ಅಲ್ಲದೇ ಅರ್ಧ ಗಂಟೆಗೂ ಹೆಚ್ಚು ಪ್ರವೇಶ ದ್ವಾರದಲ್ಲೇ ಕಾಯಿಸಿದ್ದರು.

ಪ್ರವೇಶ ನಿರಾಕರಣೆ ಮಾಹಿತಿ ತಿಳಿದ ಕನ್ನಡ ಸಂಘಟನೆಗಳು ಬುಧವಾರ ಬೆಳಿಗ್ಗೆ ಮಾಲ್ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ಮಾಲ್‌ ಬಂದ್‌ ಮಾಡುವಂತೆಯೂ ಆಗ್ರಹಿಸಿದ್ದರು. ನಂತರ, ಫಕೀರಪ್ಪ ಅವರನ್ನು ಸ್ಥಳಕ್ಕೆ ಕರೆಸಿ ಪಂಚೆ ಧರಿಸಿಯೇ ಮಾಲ್‌ಗೆ ಪ್ರವೇಶ ಮಾಡುವಂತೆ ಮಾಡಿದ್ದರು. ಅಲ್ಲದೇ ಮಾಲ್‌ ಆಡಳಿತ ಮಂಡಳಿಯ ಉಸ್ತುವಾರಿ ಸುರೇಶ್ ಅವರು ಫಕೀರಪ್ಪ ಅವರ ಕ್ಷಮೆ ಕೋರಿ ಸನ್ಮಾನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.