ಬೆಂಗಳೂರು: ಸರ್ಕಾರಿ ಜಮೀನಿಗೆ ನಿಯಮಬಾಹಿರವಾಗಿ ಆದೇಶ ಹೊರಡಿಸಿದ ಆರೋಪದ ಅಡಿ ಐಎಎಸ್ ಅಧಿಕಾರಿ ವಾಸಂತಿ ಅಮರ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಮಂಗಳವಾರ ಎಫ್‌ಐಆರ್ ದಾಖಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಸಹಾಯಕ ಪ್ರಶಾಂತ್ ಖಾನಗೌಡ ಪಾಟೀಲ್ ಅವರು ಹಲಸೂರು ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ಆ ದೂರು ಆಧರಿಸಿ ಪೊಲೀಸರು ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಂಡಿದ್ದರು.
48ನೇ ಎಸಿಎಂಎಂ ನ್ಯಾಯಾಲಯದ ಎದುರು ದೂರುದಾರರು ಹಾಜರಾಗಿ ಎನ್‌ಸಿಆರ್ ಪ್ರಕರಣದ ತನಿಖೆಗೆ ಮನವಿ ಮಾಡಿದ್ದರು. ನ್ಯಾಯಾಲಯದ ಸೂಚನೆ ಮೇರೆಗೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 257ರ ಅಡಿ ಮಂಗಳವಾರ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
‘ಹಿಂದಿನ ವಿಶೇಷ ಜಿಲ್ಲಾಧಿಕಾರಿ–3 ವಾಸಂತಿ ಅಮರ್ ಅವರು ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿಯ ಹುಚ್ಚನಪಾಳ್ಯ ಗ್ರಾಮದ ಸರ್ವೇ ನಂಬರ್ 8ರಲ್ಲಿ 10 ಎಕರೆ 20 ಗುಂಟೆ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ ನಿಯಮ ಬಾಹಿರ ಆದೇಶ ಹೊರಡಿಸಿದ್ದಾರೆ’ ಎಂಬ ದೂರು ಆಧರಿಸಿ ಎಫ್‌ಐಆರ್ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ವಾಸಂತಿ ಅಮರ್ ವಿರುದ್ಧ ಕರ್ನಾಟಕ ಭೂಕಂದಾಯ ಅಧಿನಿಯಮ 1964ರ ಸೆಕ್ಷನ್ 35 ಹಾಗೂ ಭಾರತೀಯ ನ್ಯಾಯ ಸಂಹಿತೆ 257ರ ಅಡಿ ಎಫ್‌ಐಆರ್ ದಾಖಲಿಸುವಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದರು. ಅವರ ಸೂಚನೆ ಮೇರೆಗೆ ಪ್ರಶಾಂತ್ ಖಾನಗೌಡ ಪಾಟೀಲ್ ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.