ADVERTISEMENT

ಇನ್‌ಸ್ಪೆಕ್ಟರ್ ಕುಮಾರ್ ವಿರುದ್ಧ FIR:ದಾಳಿಯ ದಿನವೇ ಪ್ರಕರಣ ದಾಖಲಿಸಿದ್ದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 4:51 IST
Last Updated 8 ಏಪ್ರಿಲ್ 2025, 4:51 IST
 ಎ.ವಿ.ಕುಮಾರ್‌
 ಎ.ವಿ.ಕುಮಾರ್‌   

ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎ.ವಿ.ಕುಮಾರ್‌, ಇಬ್ಬರು ಕಾನ್‌ಸ್ಟೆಬಲ್‌ ಸೇರಿದಂತೆ ಏಳು ಮಂದಿ ವಿರುದ್ಧ ಲೋಕಾಯುಕ್ತ ಪೊಲೀಸರು ಏಪ್ರಿಲ್‌ 1ರಂದೇ ಎಫ್‌ಐಆರ್ ದಾಖಲಿಸಿದ್ದು, ಈಗ ಬಹಿರಂಗವಾಗಿದೆ.

ಗುತ್ತಿಗೆದಾರ ಕೆ.ಕೆ.ಚನ್ನೇಗೌಡ ಅವರ ದೂರು ಆಧರಿಸಿ ಕಾನ್‌ಸ್ಟೆಬಲ್‌ಗಳಾದ ಉಮೇಶ್, ಅನಂತ್, ಖಾಸಗಿ ವ್ಯಕ್ತಿಗಳಾದ ಸಿ.ಪಿ.ಗವಿಗೌಡ, ಸಿ.ಕೆ.ದಿವ್ಯ, ಸೋಮಶೇಖರ್ ಆರಾಧ್ಯ, ದಿನೇಶ್‌ ಹಾಗೂ ಇತರೆ ನಾಲ್ಕು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್ ಪ್ರತಿ ಲಭ್ಯವಾಗಿದೆ.

ಲಂಚಕ್ಕಾಗಿ ಒತ್ತಡ ಹೇರಿ, ದೂರುದಾರರ ಕಟ್ಟಡವನ್ನು ಆರೋಪಿಗಳಲ್ಲಿ ಒಬ್ಬರ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳಲು ಯತ್ನಿಸಿದ್ದ ಆರೋಪದಡಿ ಏ.1ರಂದು ಕೆಂಗೇರಿ ಮುಖ್ಯರಸ್ತೆಯ ಶ್ರೀಶೈಲಂ ಹೋಟೆಲ್‌ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು. ಆಗ ಕೆಲವರನ್ನು ವಶಕ್ಕೆ ಪಡೆಯಲಾಗಿತ್ತು.‌

ADVERTISEMENT

‘ಸಿವಿಲ್ ಗುತ್ತಿಗೆದಾರ ಚನ್ನೇಗೌಡ ಮತ್ತು ಅವರ ಪತ್ನಿ ಅನುಷಾ ವಿರುದ್ಧ ಸೋಮಶೇಖರ್ ಆರಾಧ್ಯ ಎಂಬುವವರು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ 2024ರ ಜನವರಿಯಲ್ಲಿ ದೂರು ದಾಖಲಿಸಿದ್ದರು. ಈ ಇಬ್ಬರೂ ತಮ್ಮ ವಸತಿ ಕಟ್ಟಡವನ್ನು ಭೋಗ್ಯಕ್ಕೆ ನೀಡುತ್ತೇವೆಂದು ₹60 ಲಕ್ಷ ಪಡೆದುಕೊಂಡಿದ್ದರು. ಆದರೆ ಮನೆಯನ್ನೂ ನೀಡದೆ, ಹಣವನ್ನೂ ಪೂರ್ತಿ ಹಿಂದಿರುಗಿಸದೆ ವಂಚಿಸಿದ್ದಾರೆ’ ಎಂಬುದು ಅವರ ಆರೋಪವಾಗಿತ್ತು.

'ಅನುಷಾ ಅವರು ಸರ್ಕಾರಿ ನೌಕರಿಯಲ್ಲಿದ್ದು, ಪ್ರಕರಣ ಮುಂದುವರಿದರೆ ನೌಕರಿಗೆ ತೊಂದರೆಯಾಗುತ್ತದೆ ಎಂದು ಕುಮಾರ್ ಅವರು ಚನ್ನೇಗೌಡರಿಗೆ ತಿಳಿಸಿದ್ದರು. ಜತೆಗೆ ದೂರುದಾರರ ಜತೆ ರಾಜಿ ಮಾಡಿಕೊಂಡರೆ ಪ್ರಕರಣ ಮುಗಿಸಬಹುದು. ಇದಕ್ಕಾಗಿ ಮನೆಯನ್ನು ತಾವು ಹೇಳಿದವರಿಗೆ ಬರೆದುಕೊಡಿ ಎಂದು ಕುಮಾರ್ ಬೇಡಿಕೆ ಇಟ್ಟಿದ್ದರು' ಎಂದು ಮೂಲಗಳು ತಿಳಿಸಿವೆ.

'ಈ ಸಂಬಂಧ ಕುಮಾರ್ ಹಲವು ಬಾರಿ ಕರೆ ಮಾಡಿ ಒತ್ತಡ ಹೇರಿದರು. ₹ 4 ಕೋಟಿ ಮೌಲ್ಯದ ಕಟ್ಟಡವನ್ನು ₹ 60 ಲಕ್ಷಕ್ಕೆ ಕೇಳಿದರು. ಮನೆ ನೋಡಿಕೊಂಡು ಬರಲು ತಮ್ಮ ಅಧೀನ ಸಿಬ್ಬಂದಿ ಮತ್ತು ಸಂಬಂಧಿಗಳನ್ನೂ ಕಳುಹಿಸಿದ್ದು ಎಂದು ಚನ್ನೇಗೌಡ ಮತ್ತು ಅನುಷಾ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು‘ ಎಂದು ತಿಳಿಸಿವೆ.

ಕಟ್ಟಡ ಮಾಲೀಕತ್ವವನ್ನು ತಮ್ಮವರಿಗೆ ವರ್ಗಾಯಿಸಿಕೊಳ್ಳುವುದರ ಸಂಬಂಧ ಕುಮಾರ್, ಮಂಗಳವಾರ ರಾತ್ರಿ ಸಭೆ ನಿಗದಿ ಮಾಡಿದ್ದರು. ಅದರಂತೆ ಚನ್ನೇಗೌಡ ನಾಗರಬಾವಿಯ ಹೋಟೆಲ್ ಒಂದಕ್ಕೆ ಬಂದಿದ್ದರು. ಕುಮಾರ್ ಅವರ ಮೂವರು ಸಂಬಂಧಿ ಮತ್ತು ಅನ್ನಪೂರ್ಣೇಶ್ವರಿ ಠಾಣೆಯ ಸಿಬ್ಬಂದಿ ಹೋಟೆಲ್‌ಗೆ ಬಂದಿದ್ದರು. ಇದೇ ವೇಳೆ  ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆಯಲಾಯಿತು. ಹೋಟೆಲ್‌ಗೆ ಹೊರಟಿದ್ದ ಕುಮಾರ್, ಇಲಾಖೆಯ ಜೀಪ್ ಅನ್ನು ಮನೆಯ ಸಮೀಪದ ರಸ್ತೆಯಲ್ಲೇ ಬಿಟ್ಟು ಓಡಿ ಹೋಗಿದ್ದರು.

ಗೋಪ್ಯವಾಗಿಯೇ ಉಳಿದಿದ್ದ ಮಾಹಿತಿ ಇನ್‌ಸ್ಪೆಕ್ಟರ್‌ ಕುಮಾರ್‌ ಮತ್ತು ಇತರರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್‌ಐಆರ್‌ ದಾಖಲಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಆದರೆ ಆ ಬಳಿಕ ಯಾವುದೇ ಪ್ರಕ್ರಿಯೆ ಮುಂದುವರಿಸಿರಲಿಲ್ಲ. ಎಫ್‌ಐಆರ್‌ ಬಗ್ಗೆಯೂ ಲೋಕಾಯುಕ್ತ ಪೊಲೀಸರು ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಡಿವೈಎಸ್‌ಪಿ ವಸಂತ್‌ ಸಿ. ಅವರನ್ನು ಈ ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಲಾಗಿತ್ತು ಎಂಬ ಮಾಹಿತಿ ಎಫ್‌ಐಆರ್‌ನಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.