ADVERTISEMENT

ವಿಮಾನ ಸಿಬ್ಬಂದಿ ಜತೆ ಅನುಚಿತ ವರ್ತನೆ: ವೈದ್ಯೆ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 15:54 IST
Last Updated 21 ಜೂನ್ 2025, 15:54 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಲಗೇಜ್ ಇಡುವ ವಿಚಾರಕ್ಕೆ ಸಂಬಂಧಿಸಿದಂತೆ ವಿಮಾನ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ನಗರದ ವೈದ್ಯೆಯೊಬ್ಬರನ್ನು ವಿಮಾನದಿಂದ ಕೆಳಗೆ ಇಳಿಸಿರುವ ಘಟನೆ ನಡೆದಿದೆ.  

ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೂನ್ 17ರಂದು ಸೂರತ್​​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಕಾರಣರಾದ ಯಲಹಂಕ ನಿವಾಸಿ ವೈದ್ಯೆ ಮೋಹನ್‌ಭಾಯಿ (36) ಅವರ ವಿರುದ್ಧ ಪ್ರಕರಣ ದಾಖಲಾಗಿದೆ.  

ಸೂರತ್‌ಗೆ ಹೊರಟಿದ್ದ ಆಯುರ್ವೇದ ವೈದ್ಯೆ ಮೋಹನ್‌ಭಾಯಿ ಅವರು ಬೋರ್ಡಿಂಗ್ ಮುಗಿಸಿದ ನಂತರ, ಬ್ಯಾಗೇಜ್ ಅನ್ನು ವಿಮಾನದ ಮೊದಲ ಸಾಲಿನಲ್ಲಿ ಬಿಟ್ಟಿದ್ದರು. ಈ ಬಗ್ಗೆ ವಿಮಾನ ಸಿಬ್ಬಂದಿ ಪ್ರಶ್ನಿಸಿದಾಗ, ‘ಬ್ಯಾಗ್ ಅನ್ನು ಸೀಟ್ ನಂ.20 ಎಫ್‌ನಲ್ಲಿ ಇಡುವಂತೆ’ ಹೇಳಿದ್ದಾರೆ. ತಾನು ಹೇಳಿದಂತೆ ಮಾಡದಿದ್ದರೆ, ವಿಮಾನ ಪತನಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಎಫ್​ಐಆರ್​​ನಲ್ಲಿ ದೂರಲಾಗಿದೆ.

ADVERTISEMENT

ಬಳಿಕ ಕ್ಯಾಪ್ಟನ್ ಅವರು ತಿಳಿ ಹೇಳಲು ಪ್ರಯತ್ನಿಸಿದರೂ ಮಹಿಳೆ ವಿಮಾನದಲ್ಲಿ ಕೂಗಾಡಿ ಇತರ ಪ್ರಯಾಣಿಕರಿಗೆ ತೊಂದರೆ ಆಗುವಂತೆ ನಡೆದುಕೊಂಡಿದ್ದರು. ಆದ್ದರಿಂದ ಅವರನ್ನು ವಿಮಾನದಿಂದ ಕೆಳಗಿಳಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಅಸೋಸಿಯೇಟ್ ಮ್ಯಾನೇಜರ್ ಅಗ್ನಿಮಿತ್ರ ಬಹಿನಿಪತಿ ಅವರು ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಮಹಿಳೆಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನಂತರ ಅವರಿಗೆ ಜಾಮೀನು ಮಂಜೂರಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಹಿಳೆಯ ಅನುಚಿತ ವರ್ತನೆಯಿಂದಾಗಿ ಆ ದಿನ ವಿಮಾನ ಸಂಚಾರ ವಿಳಂಬವಾಯಿತು ಎಂಬುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.