ADVERTISEMENT

ಬೆಂಗಳೂರು: ಸಿಗ್ನಲ್‌ ಜಂಪ್‌, ಸಂಚಾರಕ್ಕೆ ಅಡ್ಡಿಪಡಿಸಿದರೂ ಎಫ್ಐಆರ್‌

ಪಶ್ಚಿಮ ವಿಭಾಗದಲ್ಲಿ ಬಿಗಿ ಕ್ರಮ ಜಾರಿ ಮಾಡಿದ ಸಂಚಾರ ಪೊಲೀಸರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 14:33 IST
Last Updated 13 ಜನವರಿ 2026, 14:33 IST
ಪಾದಚಾರಿ ಮಾರ್ಗದಲ್ಲಿ ನಿಲುಗಡೆ ಮಾಡಿದ್ದ ಆಟೊಗಳನ್ನು ತೆರವು ಮಾಡಿದ್ದ ಪೊಲೀಸರು
ಪಾದಚಾರಿ ಮಾರ್ಗದಲ್ಲಿ ನಿಲುಗಡೆ ಮಾಡಿದ್ದ ಆಟೊಗಳನ್ನು ತೆರವು ಮಾಡಿದ್ದ ಪೊಲೀಸರು   

ಬೆಂಗಳೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದರಿಂದ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಹೀಗಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಗರ ಸಂಚಾರ ವಿಭಾಗದ ಪೊಲೀಸರು ಮುಂದಾಗಿದ್ದಾರೆ.

ವ್ಹೀಲಿ ಹಾಗೂ ಮದ್ಯಸೇವಿಸಿ ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಎಫ್ಐಆರ್ ದಾಖಲಿಸುತ್ತಿದ್ದ ಸಂಚಾರ ಪೊಲೀಸರು, ಇದೀಗ ಸಿಗ್ನಲ್ ಜಂಪ್ ಮಾಡುವುದು, ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಚಲಿಸುವುದು, ಸಂಚಾರಕ್ಕೆ ಅಡಚಣೆ ಮಾಡುವವರ ಹಾಗೂ ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುವವರ ವಿರುದ್ಧವೂ ಎಫ್‌ಐಆರ್ ದಾಖಲಿಸಲು ಆರಂಭಿಸಿದ್ದಾರೆ.

ದಂಡ ಹಾಕಿ ಕಳುಹಿಸುವುದರಿಂದ ಚಾಲಕರು ಮತ್ತೆ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದರು. ಅದನ್ನು ತಪ್ಪಿಸುವ ಉದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗುತ್ತಿದೆ. ಪಶ್ಚಿಮ ವಿಭಾಗದ ಎಲ್ಲ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲೂ ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲು ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 281 (ಸಾರ್ವಜನಿಕ ಮಾರ್ಗದಲ್ಲಿ ಅಜಾಗರೂಕತೆ ಅಥವಾ ನಿರ್ಲಕ್ಷ್ಯದ ಚಾಲನೆ) ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ. ಈ ಹಿಂದೆ ನಿಯಮ ಉಲ್ಲಂಘಿಸುತ್ತಿದ್ದವರು ಸ್ಥಳದಲ್ಲೇ ದಂಡ ಪಾವತಿಸಿ ಮನೆಗೆ ತೆರಳುತ್ತಿದ್ದರು. ಮುಂದಿನ ದಿನಗಳಲ್ಲಿ ಅದಕ್ಕೆ ಅವಕಾಶ ಇಲ್ಲ. ಎಫ್‌ಐಆರ್‌ ದಾಖಲಾದ ಮೇಲೆ ಸ್ಥಳದಲ್ಲೇ ವಾಹನವನ್ನು ಜಪ್ತಿ ಮಾಡಲಾಗುತ್ತಿದೆ. ದಂಡ ಪಾವತಿಗೆ ನ್ಯಾಯಾಲಯಕ್ಕೇ ಹೋಗಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸಿಗ್ನಲ್‌ಗಳ ಬಳಿ ನಿಯಮ ಉಲ್ಲಂಘನೆ(ಸಿಗ್ನಲ್‌ ಜಂಪಿಂಗ್‌) ಪ್ರಕರಣಗಳಿಗೆ ಸಂಬಂಧಿಸಿದಂತೆ 2025ರ ಜನವರಿಯಿಂದ ನವೆಂಬರ್‌ವರೆಗೆ 6,62,447 ಪ್ರಕರಣ, ನಿರ್ಬಂಧಿತ ರಸ್ತೆಯಲ್ಲಿ ಸಂಚರಿಸಿದವರ ವಿರುದ್ಧ 3,02,962 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಬಸ್​​ ಹಾಗೂ ರೈಲು ನಿಲ್ದಾಣಗಳ ಬಳಿಯ ನಿರ್ಬಂಧಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ಆಟೊ ರಿಕ್ಷಾ, ಕಾರು ಹಾಗೂ ದ್ವಿಚಕ್ರ ವಾಹನಗಳ ಮಾಲೀಕರ ವಿರುದ್ಧವೂ ಪ್ರಕರಣ ದಾಖಲು ಮಾಡಿಕೊಳ್ಳಲಾಗುತ್ತಿದೆ. ಸಿಗ್ನಲ್ ಜಂಪ್‌ ಮಾಡುವುದರಿಂದ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಹೀಗಾಗಿ ಬಿಗಿಯಾದ ಕ್ರಮ ಜಾರಿಗೆ ತರಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ದಾಖಲೆ ದಂಡ ಸಂಗ್ರಹ: 2025ರಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ₹251.26 ಕೋಟಿ ದಂಡ ಸಂಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.