ಬೆಂಗಳೂರು: ವೃದ್ಧೆಯೊಬ್ಬರ ಹೆಸರಿನಲ್ಲಿ ಸಿಮ್ ಖರೀದಿಸಿ, ಅಕ್ರಮ ಚಟುಚಟಿಕೆಗೆ ಬಳಕೆ ಮಾಡುತ್ತಿರುವುದಾಗಿ ಹೇಳಿ ಟೆಲಿಕಾಂ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ 77 ವರ್ಷದ ವೃದ್ಧೆಗೆ ₹1.28 ಕೋಟಿ ವಂಚಿಸಿದ್ದು, ನಗರದ ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲೈ 19ರಂದು ವೃದ್ಧೆ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
‘ಐಸಿಐಸಿಐ ಬ್ಯಾಂಕ್‌ನಲ್ಲಿ ವೃದ್ಧೆ ಖಾತೆ ಹೊಂದಿದ್ದಾರೆ. ಜೂನ್ 26ರಂದು ಟೆಲಿಕಾಂ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ‘ನಿಮ್ಮ ಹೆಸರಿನಲ್ಲಿ ಮುಂಬೈನ ಅಂಧೇರಿ ವೆಸ್ಟ್ ಶಾಪ್‌ನಲ್ಲಿ ಸಿಮ್ ಖರೀದಿಯಾಗಿದ್ದು, ಅದನ್ನು ಅಕ್ರಮ ಚಟುವಟಿಕೆಗೆ ಬಳಕೆ ಮಾಡಲಾಗುತ್ತಿದೆ. ಅಲ್ಲದೇ ಆ ನಂಬರ್‌ನಿಂದ ಕಿರುಕುಳದ ಸಂದೇಶವನ್ನು ಹಲವರಿಗೆ ಕಳುಹಿಸಲಾಗುತ್ತಿದೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದೆಯೆಂದು ಸೈಬರ್ ವಂಚಕರು ಬೆದರಿಕೆ ಒಡ್ಡಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಮುಂಬೈ ಪೊಲೀಸರೆಂದು ಹೇಳಿಕೊಂಡು ಸಂದೀಪ್ ರಾವ್, ಆಕಾಶ್ ಕುಲಹರಿ ಎಂಬುವವರು ವಿಡಿಯೊ ಕರೆ ಮಾಡಿದ್ದರು. ನಿಮ್ಮ ಹೆಸರಿನಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿದ್ದು, ಆ ಖಾತೆಗೆ ಮೊಬೈಲ್ ನಂಬರ್ ಜೋಡಣೆ ಮಾಡಲಾಗಿದೆ. ಖಾತೆಗೆ ರಾಕೇಶ್ ಕುಂದ್ರಾ ಎಂಬುವವರು ₹60 ಕೋಟಿ ವರ್ಗಾವಣೆ ಮಾಡಿದ್ದಾರೆಂದು ನಕಲಿ ಎಫ್‌ಐಆರ್ ಹಾಗೂ ಸುಪ್ರೀಂ ಕೋರ್ಟ್‌ನ ನಕಲಿ ವಾರಂಟ್ ಅನ್ನು ವಂಚಕರು ಕಳುಹಿಸಿದ್ದರು. ಹೂಡಿಕೆ ಮಾಡಿರುವ ಹಣದ ಬಗ್ಗೆ ತಪಾಸಣೆ ನಡೆಸಲು ಸಹಕರಿಸಬೇಕು. ಇಲ್ಲವೇ ನಿಮ್ಮನ್ನು ಬಂಧಿಸುತ್ತೇವೆ ಎಂದು ವೃದ್ಧೆಗೆ ಬೆದರಿಸಿ ಹಂತಹಂತವಾಗಿ ಹಣ ಪಡೆದುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.