ADVERTISEMENT

ಚಂದಾದಾರರ ಮಾಹಿತಿ ಕಳವು: ಸೈಬರ್‌ ವಂಚಕರಿಗೆ ಮಾರಾಟ - ಎಫ್‌ಐಆರ್ ದಾಖಲು

71 ಪಿಒಎಸ್‌ಗಳ ವಿರುದ್ಧ ಸಿಸಿಬಿ ಠಾಣೆಯಲ್ಲಿ ಎಫ್‌ಐಆರ್ ದಾಖಲು

​ಪ್ರಜಾವಾಣಿ ವಾರ್ತೆ
Published 24 ಮೇ 2025, 15:18 IST
Last Updated 24 ಮೇ 2025, 15:18 IST
ಸೈಬರ್‌ ಅಪರಾಧ (ಸಾಂದರ್ಭಿಕ ಚಿತ್ರ)
ಸೈಬರ್‌ ಅಪರಾಧ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಚಂದಾದಾರ ಮಾಹಿತಿ ಕದ್ದು ಸೈಬರ್‌ ವಂಚಕರಿಗೆ ನೀಡಿದ್ದ ಆರೋಪದ ಮೇರೆಗೆ ನಗರದ 71 ಪಾಯಿಂಟ್ ಆಫ್ ಸೇಲ್‌ಗಳ (ಪಿಒಎಸ್‌) ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಜಯನಗರದಲ್ಲಿ ಇರುವ ದೂರ ಸಂಪರ್ಕ ಇಲಾಖೆಯ ನಿರ್ದೇಶಕ ಮಧುದಾಸ್‌ ಅವರು ನೀಡಿದ ದೂರು ಆಧರಿಸಿ, ಪಿಒಎಸ್‌ಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರಿಗೆ ಮಧುಸೂದನ್‌ ಅವರು ದೂರು ನೀಡಿದ್ದರು. ಈ ದೂರನ್ನು ದಯಾನಂದ ಅವರು ಸಿಸಿಬಿಗೆ ವರ್ಗಾವಣೆ ಮಾಡಿದ್ದರು. ಸಿಸಿಬಿ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದಾಗ, ದೂರ ಸಂಪರ್ಕ ಇಲಾಖೆಯ ಮಾರಾಟ ಪರವಾನಗಿಯ ನಿಬಂಧನೆಗಳ ಮೇಲೆ ಪರವಾನಗಿ ಪಡೆದುಕೊಂಡಿರುವ ಪೂರೈಕೆದಾರರ ಪೈಕಿ, 71 ಪಿಒಎಸ್‌ಗಳು ನಿಬಂಧನೆಗಳನ್ನು ಉಲ್ಲಂಘಿಸಿ ಚಂದಾದಾರರ ಮಾಹಿತಿಗಳನ್ನು ಕಳವು ಮಾಡಿ ಸೈಬರ್‌ ವಂಚಕರಿಗೆ ವಿತರಿಸುವ ಮೂಲಕ ಅಪರಾಧ ಎಸಗಿರುವುದು ಗೊತ್ತಾಗಿತ್ತು. ನಗರದ ವಿವಿಧೆಡೆಯ ಡೀಲರ್‌ಗಳು ಕೃತ್ಯ ಎಸಗಿರುವುದು ಗೊತ್ತಾದ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಅಪರಾಧ) ಅವರು ಸಿಸಿಬಿ ಇನ್‌ಸ್ಪೆಕ್ಟರ್‌ ಆರ್‌.ಸಂತೋಷ್‌ ರಾಮ್‌ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಿದ್ದರು’ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ದೂರಸಂಪರ್ಕ ಇಲಾಖೆಯ ಪರವಾನಗಿ ನಿಬಂಧನೆಗಳ ಪ್ರಕಾರ ಪರವಾನಗಿದಾರರು (ಟೆಲಿಕಾಂ ಸೇವಾ ಪೂರೈಕೆದಾರರು) ಫ್ರಾಂಚೈಸಿಯನ್ನು ನೇಮಿಸಬಹುದಾಗಿದೆ. ಇದರ ಅಡಿಯಲ್ಲಿ ಏಜೆಂಟರ್‌– ವಿತರಕರು ಪ್ರತ್ಯೇಕವಾಗಿ ಅಥವಾ ಒಟ್ಟಾರೆಯಾಗಿ ಪಾಯಿಂಟ್ ಆಫ್ ಸೇಲ್‌ (ಪಿಒಎಸ್‌) ಸೇವೆ ಒದಗಿಸಲು ಅನುಮತಿ ನೀಡಲಾಗಿರುತ್ತದೆ. ಹೀಗೆ 289 ಮಾರಾಟ ಪಾಯಿಂಟ್‌ ಗುರುತಿಸಲಾಗಿತ್ತು. ಅದರ ಪೈಕಿ 71 ಪಾಯಿಂಟ್‌ ಆಫ್‌ ಸೇಲ್‌ನ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಸೈಬರ್‌ ವಂಚನೆಯಲ್ಲಿ ಭಾಗಿಯಾದವರಿಗೆ ಸಿಮ್‌ಗಳನ್ನು ಮಾರಾಟ ಮಾಡಿರುವ ಹಾಗೂ ಚಂದಾದಾರರ ಮಾಹಿತಿ ಕಳವು ಮಾಡಿರುವ ಅನುಮಾನವಿದೆ. ತನಿಖೆ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.