
ಬೆಂಗಳೂರು: ಹೊರವಲಯದ ಬೇಗೂರಿನ ಅಕ್ಷಯ್‌ನಗರದಲ್ಲಿ ಗುಜರಿ ಸಂಗ್ರಹಿಸಿಡುವ ಗೋದಾಮಿನಲ್ಲಿ ಗುರುವಾರ ನಸುಕಿನ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಗೋದಾಮಿನಲ್ಲಿದ್ದ ವಸ್ತುಗಳು ಹಾಗೂ ಪಕ್ಕದಲ್ಲಿದ್ದ ಐದು ಶೆಡ್‌ಗಳು ಸುಟ್ಟು ಹೋಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಶೆಡ್‌ನಲ್ಲಿ ನೆಲಸಿದ್ದವರು ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ನಾಲ್ಕು ವಾಹನಗಳು ಹಾಗೂ 20ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಿದರು ಎಂದು ಮೂಲಗಳು ಹೇಳಿವೆ.
ಗೋದಾಮಿನಲ್ಲಿ ಸಂಗ್ರಹಿಸಿದ್ದ ಹಳೆಯ ಪ್ಲಾಸ್ಟಿಕ್ ವಸ್ತುಗಳು ಧಗಧಗನೆ ಹೊತ್ತಿ ಉರಿದಿದ್ದು, ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ಅಗ್ನಿ ಅವಘಡಕ್ಕೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಬೇಗೂರು ಠಾಣೆಯ ಪೊಲೀಸರು ತೆರಳಿ ಪರಿಶೀಲಿಸಿದರು.
ಶೆಡ್‌ಗಳಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ನೆಲಸಿದ್ದಾರೆ ಎನ್ನುವ ಶಂಕೆಯ ಮೇಲೆ ಕಳೆದ ವಾರ ಕಾರ್ಯಾಚರಣೆ ನಡೆಸಲಾಗಿತ್ತು. ಕಾರ್ಯಾಚರಣೆ ವೇಳೆ ಶೆಡ್‌ನಲ್ಲಿ ನೆಲಸಿದ್ದವರು ಪರಾರಿ ಆಗಿದ್ದರು. ಎರಡು ದಿನಗಳ ಹಿಂದೆ ಕೆಲವರು ಮತ್ತೆ ಅದೇ ಶೆಡ್‌ಗೆ ಬಂದು ನೆಲಸಿದ್ದರು. ಗುರುವಾರ ನಸುಕಿನ ವೇಳೆ ಒಂದು ಶೆಡ್‌ನಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಅದು ವ್ಯಾಪಿಸಿತ್ತು ಎಂದು ಹೇಳಲಾಗಿದೆ. ಗೋದಾಮಿನಲ್ಲಿಯೇ ಮೊದಲಿಗೆ ಬೆಂಕಿ ಕಾಣಿಸಿಕೊಂಡು ಅದು ಶೆಡ್‌ಗಳಿಗೂ ವ್ಯಾಪಿಸಿತು ಎಂದು ಇನ್ನೂ ಕೆಲವರು ಮಾಹಿತಿ ನೀಡಿದ್ದಾರೆ. ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.