ADVERTISEMENT

‘ಖುಷಿಯಲ್ಲಿ ಮೈಮರೆತಾಗ ಕರಕಲಾದವು ಕನಸಿನ ಕಾರುಗಳು’

ವೈಮಾನಿಕ ಪ್ರದರ್ಶನದ ಪಾಲಿಕೆ ಕರಾಳ ಶನಿವಾರ

ಪ್ರವೀಣ ಕುಮಾರ್ ಪಿ.ವಿ.
Published 24 ಫೆಬ್ರುವರಿ 2019, 11:04 IST
Last Updated 24 ಫೆಬ್ರುವರಿ 2019, 11:04 IST
   

ಬೆಂಗಳೂರು: ಯಲಹಂಕದ ವಾಯುನೆಲೆ ಬಳಿಯ ನೀಲಾಕಾಶದಲ್ಲಿ ಲೋಹದ ಹಕ್ಕಿಗಳು ಮೈನವಿರೇಳಿಸುವ ಕಸರತ್ತು ಪ್ರದರ್ಶಿಸುತ್ತಿದ್ದರೆ, ಇನ್ನೊಂದೆಡೆ ಅಗ್ನಿಜ್ವಾಲೆಯ ರುದ್ರನರ್ತನವೇ ನಡೆಯಿತು. ಸಾರಂಗ ತಂಡದ ರಂಗಿನಾಟ ನೋಡುತ್ತಾ ವೀಕ್ಷಕರು ಮೈಮರೆತಿದ್ದರೆ, 300ಕ್ಕೂ ಅಧಿಕ ಮಂದಿಯ 'ಕನಸಿನ ಕಾರು'ಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಕರಕಲಾದವು.

ಆರಂಭದಿಂದಲೇ ಒಂದಿಲ್ಲೊಂದು ವಿಘ್ನ ಎದುರಿಸಿದ ಏರೋ ಇಂಡಿಯಾ 2019 ಪಾಲಿಗೆ ಫೆ.23 ಕರಾಳ ಶನಿವಾರವಾಯಿತು.

ಶನಿವಾರ ಮೊದಲ ಬಾರಿ ವೈಮಾನಿಕ ಪ್ರದರ್ಶನದ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಹಾಗಾಗಿ ಭಾರಿ ಸಂಖ್ಯೆಯಲ್ಲಿ ಪ್ರೇಕ್ಷಕರು ವಾಯುನೆಲೆಯತ್ತ ಮುಖಮಾಡಿದ್ದರು. ಲೋಹದ ಹಕ್ಕಿಗಳ ಲೀಲೆಗಳನ್ನು ಆಸ್ವಾದಿಸುತ್ತಾ ಖುಷಿಯ ಹೊನಲಿನಲ್ಲಿ ತೇಲಲು ಬಂದವರು ದಿನವಿಡೀ ದುಗುಡದಿಂದ ಕಳೆಯಬೇಕಾಯಿತು.

ADVERTISEMENT

ಸಾರಂಗ ತಂಡದ ನಾಲ್ಕು ಹೆಲಿಕಾಪ್ಟರ್‌ಗಳು ಬೆಳಗ್ಗಿನ ಪ್ರದರ್ಶನ ಮುಗಿಸಿ ಇನ್ನೇನು ಧರೆಗಿಳಿಯಲು ಸಜ್ಜಾಗಿದ್ದವು. ಇನ್ನೊಂದೆಡೆ ಮಹಿಳಾ ದಿನದ ಪ್ರಮುಖ ಆಕರ್ಷಣೆಯಾಗಿ ಬ್ಯಾಡ್ಮಿಂಟಪ್‌ ತಾರೆ ಪಿ.ವಿ.ಸಿಂಧು ತೇಜಸ್‌ ಬೆನ್ನೇರಿ ನಭದತ್ತ ಸವಾರಿ ಹೊರಟಿದ್ದರು. ಅಷ್ಟರಲ್ಲೇ ಪೂರ್ವದಿಕ್ಕಿನಲ್ಲಿ ಪುಟ್ಟದಾಗಿ ಕಾಣಿಸಿಕೊಂಡ ಹೊಗೆ ಕ್ಷಣಕ್ಷಣಕ್ಕೂ ದಟ್ಟೈಸುತ್ತಾ ಹೋಯಿತು. ಅರೆ ಘಳಿಗೆಯಲ್ಲೇ ಬೃಹದಾಕಾರವಾಗಿ ಬೆಳೆದು ಮುಗಿಲು ಮುಟ್ಟಿದ ಧೂಮರಾಶಿ ವಾಯುನೆಲೆಯ ಆಗಸದ ತುಂಭಾ ಕಾರ್ಮೋಡ ಕವಿಯುವಂತೆ ಮಾಡಿತು.

ಏನಾಗುತ್ತಿದೆ ಎಂದೇ ತೋಚದ ಸ್ಥಿತಿ. ಆಗ ತಾನೆ ಬಾನಿಗೇರಿದ ತೇಜಸ್‌ ಬೇರೆ ಕಾಣಿಸುತ್ತಿರಲಿಲ್ಲ. ಮತ್ತೊಂದು ವಿಮಾನ ಪತನವಾಯಿತೆಂದೇ ಬಹುತೇಕರು ಭಾವಿಸಿದ್ದರು. ಅಷ್ಟರಲ್ಲಿ ಆಯೋಜಕರು, ‘ಗಾಬರಿಪಡುವಂತಹದ್ದು ಏನಿಲ್ಲ. ವಾಯುನೆಲೆಯ ಹೊರಗೆ ತರಗೆಲೆಗಳಿಗೆ ಬೆಂಕಿ ಬಿದ್ದಿದೆ. ವೈಮಾನಿಕ ಪ್ರದರ್ಶನ ನಿರಾತಂಕವಾಗಿ ಮುಂದುವರಿಯುತ್ತದೆ’ ಎಂದು ಘೋಷಿಸಿಬಿಟ್ಟರು.

ಸದ್ಯ ಏನು ಆಗಿಲ್ಲವಲ್ಲ ಎಂದು ನಿಟ್ಟುಸಿರು ಬಿಟ್ಟರೂ, ಹಿಗ್ಗುತ್ತಿದ್ದ ಹೊಗೆಯ ರಾಶಿ ಮಾತ್ರ ಮನದ ದುಗುಡವನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಏನು ನಡೆಯುತ್ತಿದೆ ಎಂದು ಸ್ಪಷ್ಟವಾಗಿ ತಿಳಿಯದ ಸ್ಥಿತಿ. ಹೊಗೆ ಕಾಣಿಸಿಕೊಂಡು ಇನ್ನೂ ಅರ್ಧ ಗಂಟೆ ಕಳೆದಿರಲಿಲ್ಲ. ‘ಏನೂ ಆಗಿಲ್ಲವಂತೆ’ ಎಂದು ಸಮಾಧಾನ ಪಟ್ಟುಕೊಂಡವರೆಲ್ಲ ಬೆಚ್ಚಿ ಬೀಳುವ ಸುದ್ದಿ ಹಬ್ಬಲಾರಂಭಿಸಿತು.

‘ವೈಮಾನಿಕ ಪ್ರದರ್ಶನದ ಸಾರ್ವಜನಿಕ ವಾಹನ ನಿಲುಗಡೆ ತಾಣದಲ್ಲಿ ನಿಲ್ಲಿಸಿದ್ದ ನೂರಾರು ಕಾರುಗಳು ಬೆಂಕಿಗಾಹುತಿಯಾಗಿವೆ’ ಎಂಬ ಮಾಹಿತಿ ಬಂದಾಗ ವಿಮಾನ ಪ್ರದರ್ಶನ ವೀಕ್ಷಿಸುತ್ತಿದ್ದವರೆಲ್ಲ ದಿಗಿಲುಗೊಂಡಲು. ಕಾರು ನಿಲ್ಲಿಸಿ ಬಂದವರೆಲ್ಲ ಪಾರ್ಕಿಂಗ್‌ ಸ್ಥಳಕ್ಕೆ ಧಾವಿಸಿದರು. ವಾಯುನೆಲೆಯಿಂದ ಸುಮಾರು 3.5 ಕಿ.ಮೀ ದೂರದಲ್ಲಿದ್ದ ಆ ಸ್ಥಳವನ್ನು ತಲುಪುವುದೂ ಸುಲಭವಿರಲಿಲ್ಲ. ಅಲ್ಲಿಗೆ ತಲುಪಲು ಬಸ್‌ ವ್ಯವಸ್ಥೆ ಮಾಡಲಾಗಿತ್ತಾದ್ದರೂ ಬೆಂಕಿ ಅವಘಡದ ಕಾರಣ ಅದನ್ನೂ ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಹಾಗಾಗಿ ಬಹುತೇಕರು ನಡೆದೇ ಸ್ಥಳ ತಲುಪಿದರು. ಗೇಟ್‌ ನಂ.5ರ ಮೂಲಕ ಸಾರ್ವಜನಿಕರು ಪಾರ್ಕಿಂಗ್‌ ತಾಣ ತಲುಪದಂತೆ ಸೇನಾ ಸಿಬ್ಬಂದಿ ತಡೆದರು. ಇದು ಕಾರು ನಿಲ್ಲಿಸಿ ಬಂದವರ ಆತಂಕವನ್ನು ಇಮ್ಮಡಿಗೊಳಿಸಿತು.

ಹಾಗೋ ಹೀಗೋ ಪಾರ್ಕಿಂಗ್‌ ಸ್ಥಳವನ್ನೂ ತಲುಪಿ ನೋಡಿದವರು ಅಲ್ಲಿ ಸಾಲು ಸಾಲು ಕಾರುಗಳು ಕರಕಲಾಗಿರುವುದನ್ನು ಕಂಡು ಅಕ್ಷರಶಃ ದಂಗಾಗಿ ಹೋದರು. ಸುಟ್ಟು ಹೋದ ನೂರಾರು ಕಾರುಗಳಲ್ಲಿ ಒಂದೇ ಕಂಪನಿಯ ಒಂದೇ ಮಾದರಿಯ ಹತ್ತಾರು ಕಾರುಗಳಿದ್ದವು. ಆ ಎಲ್ಲ ಕಾರುಗಳೂ ನೋಡಲು ಒಂದೇ ರೀತಿ ಇದ್ದವು. ನಂಬರ್‌ ಪ್ಲೇಟ್‌ಗಳೂ ಸಂಪೂರ್ಣ ಸುಟ್ಟುಹೋಗಿದ್ದರಿಂದ, ಕಾರುಗಳ ಅವಶೇಷದಲ್ಲಿ ತಮ್ಮದು ಯಾವುದು ಎಂದು ಹುಡುಕುವಷ್ಟರಲ್ಲಿ ಮಾಲೀಕರು ಹೈರಾಣಾದರು.

250ಕ್ಕೂ ಅಧಿಕ ಕಾರುಗಳು ಸಂಪೂರ್ಣ ಅಗ್ನಿಗಾಹುತಿಯಾಗಿದ್ದವು. ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ ಕೆಲವು ಕಾರುಗಳ ಲೋಹದ ಭಾಗಗಳೂ ಕರಗಿ ಹೋಗಿದ್ದವು.

ಇನ್ನು ಕೆಲವರಿಗೆ ವಾಹನ ಎಲ್ಲಿ ನಿಲ್ಲಿಸಿದ್ದೆ ಎಂಬುದೇ ಮರೆತು ಹೋಗಿತ್ತು. ಸುಟ್ಟ ಕಾರುಗಳ ಸಾಲಿನಲ್ಲಿ ಹುಡುಕುವುದೇ ಅಥವಾ ಹಾನಿಗೊಳಗಾಗದ ಕಾರುಗಳಿರುವ ಜಾಗದಲ್ಲಿ ಹುಡುಕುವುದೇ ಎಂಬ ಗೊಂದಲ ಅವರದು.

ಕಾರು ಕಳೆದುಕೊಂಡವರ ಕಳಾಹೀನ ಮುಖಗಳು ಈ ದುರ್ಘಟನೆಯ ಕರಾಳತೆಯನ್ನು ಕಟ್ಟಿಕೊಡುತ್ತಿದ್ದವು. ಬೆಂಕಿಯ ಕೆನ್ನಾಲಿಗೆಗೆ ಸಿಗಬೇಕಿದ್ದ ಕಾರು ಸ್ವಲ್ಪದರಲ್ಲೇ ಬಚಾವಾದ ಮಾಲೀಕರೂ ವಾಹನ ಕಳೆದುಕೊಂಡವರನ್ನು ಸಂತೈಸಿದರು. ಇಲ್ಲಿಡೀ ಶೋಖ ಮಡುಗಟ್ಟಿತ್ತು.

ಇಷ್ಟೆಲ್ಲಾ ಘಟನೆಗಳ ನಡುವೆಯೂ ಯಲಹಂಕದ ಬಾನಿನಲ್ಲಿ ತೇಜಸ್‌ ಹಾಗೂ ರಫೇಲ್‌ ಲಘು ಯುದ್ಧ ವಿಮಾನಗಳು ಆರ್ಭಟಿಸುತ್ತಾ ಕಸರತ್ತು ಮುಂದುವರಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.