ADVERTISEMENT

ನಕಲಿ ಅಂಕಪಟ್ಟಿ: 7 ಅಭ್ಯರ್ಥಿಗಳ ವಿರುದ್ಧ ಎಫ್‌ಐಆರ್

ಅಗ್ನಿಶಾಮಕ ಇಲಾಖೆ ನೇಮಕಾತಿ

​ಪ್ರಜಾವಾಣಿ ವಾರ್ತೆ
Published 23 ಮೇ 2022, 16:30 IST
Last Updated 23 ಮೇ 2022, 16:30 IST

ಬೆಂಗಳೂರು: ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ನೇಮಕಾತಿ ಪ್ರಕ್ರಿಯೆಯಲ್ಲಿ ನಕಲಿ ಅಂಕಪಟ್ಟಿ ನೀಡಿದ್ದ ಆರೋಪದಡಿ ಏಳು ಅಭ್ಯರ್ಥಿಗಳ ವಿರುದ್ಧ ಭಾರತಿನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಇಲಾಖೆಯ ಉಪನಿರ್ದೇಶಕ ಟಿ.ಎನ್. ಶಿವಶಂಕರ್ ದೂರು ನೀಡಿದ್ದಾರೆ. ಇದರನ್ವಯ 7 ಅಭ್ಯರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಖಲೆಗಳನ್ನು ಕಲೆಹಾಕಲಾಗುತ್ತಿದ್ದು, ಅಭ್ಯರ್ಥಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕಿದೆ’ ಎಂದು ಪೊಲೀಸರು ಹೇಳಿದರು.

‘ಇಲಾಖೆಯಲ್ಲಿ ಖಾಲಿ ಇರುವ ಅಗ್ನಿಶಾಮಕ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿಗಾಗಿ 2021ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿ, ದೇಹದಾರ್ಢ್ಯ ಹಾಗೂ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಗಿತ್ತು. ನಂತರ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿತ್ತು’ ಎಂದೂ ತಿಳಿಸಿದರು.

ADVERTISEMENT

‘ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳಿಂದ ಶೈಕ್ಷಣಿಕ ಹಾಗೂ ಇತರೆ ದಾಖಲೆಗಳನ್ನು ಪರಿಶೀಲನೆಗಾಗಿ ಪಡೆದು, ಸಂಬಂಧಪಟ್ಟ ಪರೀಕ್ಷಾ ಮಂಡಳಿಗಳಿಗೆ ಕಳುಹಿಸಲಾಗಿತ್ತು. ಆ ಪೈಕಿ ಅಭ್ಯರ್ಥಿಗಳಾದ ಹೊಸಪೇಟೆಯ ಡಿ.ಎಚ್. ಸುಭಾಷ್, ಕಲಬುರಗಿಯ ವಿಥೋಲ್ ನಿಂಗಪ್ಪ, ಈರಣ್ಣ ರುದ್ರೂಡಗಿ, ಕೊಪ್ಪಳದ ಮೌಲಾಸಾಬ್ ಶಾಮೀದ್‌ಸಾಬ್, ಮಲ್ಲಪ್ಪ ಮಾರುತಿ, ಷರೀಫ್‌ ಸಾಬ್ ಯಮನೂರು ಹಾಗೂ ಯಾದಗಿರಿಯ ರಮೇಶ್ ಹಾಳನೊರೆ ಅವರ ಎಸ್ಸೆಸ್ಸೆಲ್ಸಿ ಅಂಕಪಟ್ಟಿಗಳು ನಕಲಿ ಎಂಬುದು ಗೊತ್ತಾಗಿದೆ’ ಎಂದೂ ವಿವರಿಸಿದರು.

‘ಆರೋಪಿಗಳು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಹೆಸರಿನಲ್ಲಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿಗಳನ್ನು ನೀಡಿದ್ದರು. ಆದರೆ, ಇವುಗಳು ನಕಲಿ ಎಂಬುದಾಗಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಹೇಳಿದೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.