ADVERTISEMENT

ಗ್ರಂಥಿಗೆ ಅಂಗಡಿಯಲ್ಲಿ ಬೆಂಕಿ; ಮಾಲೀಕ ಸಜೀವ ದಹನ

ಅವಘಡವೋ, ಆತ್ಮಹತ್ಯೆಯೋ; ಪೊಲೀಸರ ತನಿಖೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 19:51 IST
Last Updated 24 ಜುಲೈ 2020, 19:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದ ಅವೆನ್ಯೂ ರಸ್ತೆಯಲ್ಲಿರುವ ಗ್ರಂಥಿಗೆ ಅಂಗಡಿಯೊಂದರಲ್ಲಿ ಶುಕ್ರವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದ್ದು, ಅಂಗಡಿ ಮಾಲೀಕ ಮನುಕುಮಾರ್ (44) ಎಂಬುವರು ಸಜೀವವಾಗಿ ದಹನವಾಗಿದ್ದಾರೆ.

ಕೊರೊನಾ ಸೋಂಕಿತರು ಕಂಡುಬಂದಿದ್ದರಿಂದ ಅವೆನ್ಯೂ ರಸ್ತೆಯ ಕೆಲ ಭಾಗವನ್ನು ಸೀಲ್‌ಡೌನ್ ಮಾಡಲಾಗಿದೆ. ಸೀಲ್‌ಡೌನ್ ಪ್ರದೇಶದಲ್ಲೇ ಈ ಅಂಗಡಿ ಇದೆ. ಮಧ್ಯಾಹ್ನ 1.20ರ ಸುಮಾರಿಗೆ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೆಲ ನಿಮಿಷದಲ್ಲಿ ಇಡೀ ಅಂಗಡಿ ಬೆಂಕಿಯಿಂದ ಹೊತ್ತಿ ಉರಿಯಲಾರಂಭಿಸಿತ್ತು.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಒಂದು ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಅಂಗಡಿಯೊಳಗೆ ಸುಟ್ಟ ಅವಶೇಷಗಳಲ್ಲಿ ಮಾಲೀಕ ಮನುಕುಮಾರ್ ಮೃತದೇಹ ಸಹ ಇತ್ತು. ಅದು ಸಂಪೂರ್ಣ ಸುಟ್ಟು ಹೋಗಿತ್ತು.

ADVERTISEMENT

‘ಸೀಲ್‌ಡೌನ್‌ ಮಾಡಿದ್ದರೂ ಮಾಲೀಕ ತಮ್ಮ ಅಂಗಡಿ ತೆರೆದಿದ್ದರು. ಅದಕ್ಕೆ ಕಾರಣ ಗೊತ್ತಾಗಿಲ್ಲ. ಮಧ್ಯಾಹ್ನ ಬೆಂಕಿ ಹೊತ್ತಿಕೊಂಡಾಗಲೂ ಮಾಲೀಕ, ಅಂಗಡಿಯಿಂದ ಹೊರಗೆ ಬಂದಿಲ್ಲ. ರಕ್ಷಣೆಗಾಗಿ ಯಾವುದೇ ರೀತಿಯಲ್ಲೂ ಕಿರುಚಾಡಿಲ್ಲ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದರು.

‘ಈ ಬೆಂಕಿ ಅವಘಡ ಆಕಸ್ಮಿಕವೋ ಅಥವಾ ಮಾಲೀಕರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಎಂಬುದು ತನಿಖೆಯಿಂದ ತಿಳಿಯಬೇಕು’ ಎಂದೂ ಹೇಳಿದರು.

ಡಿಸಿಪಿ ಭೇಟಿ: ಪಶ್ಚಿಮ ವಿಭಾಗದ ಪ್ರಭಾರಿ ಡಿಸಿಪಿ ಶಶಿಕುಮಾರ್, ಘಟನಾ ಸ್ಥಳಕ್ಕೆ ಭೇಟಿ ನೀಡಿದರು.

‘ಬೆಂಕಿ ಅವಘಡ ಸಂಬಂಧ ಕೆ.ಆರ್.ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಶಶಿಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.