ಬೆಂಗಳೂರು:ಸ್ಥಳದಲ್ಲಿ ಬೆಂಕಿ ಅನಾಹುತದಲ್ಲಿ ಸುಟ್ಟಿರುವ ಕಾರುಗಳಿಗೆ ಹೇಗೆ ಪರಿಹಾರ ಪಡೆಯುವುದು ಎಂದು ಸಂತ್ರಸ್ತರು ಗೊಂದಲದಲ್ಲಿ ಮುಳುಗಿದ್ದಾರೆ. ಆದರೆ, ಸಮಗ್ರ ವಿಮೆ ಸೌಲಭ್ಯ (ಕಾಂಪ್ರಹೆನ್ಸಿವ್ ಇನ್ಸೂರೆನ್ಸ್ ಕವರೇಜ್) ಇದ್ದರೆ ಪರಿಹಾರ ನೀಡಲಾಗುತ್ತದೆ ಎಂದು ವಿಮಾ ಕಂಪನಿಗಳು ತಿಳಿಸಿವೆ.
ಪರಿಹಾರ ಪಡೆಯುವುದು ಹೇಗೆ?: ‘ಘಟನೆ ನಡೆದ 24 ಗಂಟೆಯ ಒಳಗಾಗಿ ಆಯಾ ವಿಮಾ ಕಂಪನಿಗಳ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಪಾಲಿಸಿ ಸಂಖ್ಯೆ ಮತ್ತು ಆರ್‌ಸಿಯಲ್ಲಿರುವ ಮಾಹಿತಿ ನೀಡಿ, ಕ್ಲೈಮ್ ನೋಂದಣಿ ಮಾಡಿಕೊಂಡರೆ ಪರಿಹಾರ ಪ್ರಕ್ರಿಯೆ ತ್ವರಿತಗೊಳ್ಳುತ್ತದೆ.ಆಗ ಕಂಪನಿಯವರು ಒಂದು ಉಲ್ಲೇಖ ಸಂಖ್ಯೆ ನೀಡುತ್ತಾರೆ. ಬಳಿಕ ಕಂಪನಿ ತನಿಖಾ ಅಧಿಕಾರಿ ಪರಿಶೀಲನೆ ನಡೆಸುತ್ತಾರೆ. ಎಲ್ಲ ಪ್ರಕ್ರಿಯೆ ಮುಗಿಯಲು ಕನಿಷ್ಠ ತಿಂಗಳು ಬೇಕು’ ಎಂದು ಟಾಟಾ ಎಐಜಿ ಇನ್ಸೂರೆನ್ಸ್‌ನ ರಿಲೇಷನ್ ಶಿಪ್ ಮ್ಯಾನೇಜರ್‌ವಿ.ರತ್ನಕಲಾ ತಿಳಿಸಿದರು.
‘ಕಾರಿಗೆ ಶೇ 75ರಷ್ಟು ಹಾನಿಯಾಗಿದ್ದರೆ ವಿಮೆಯ ಘೋಷಿತ ಮೌಲ್ಯದ (ಐಡಿವಿ) ಶೇ 100ರಷ್ಟು ಸಿಗುತ್ತದೆ. ಆ ವಾಹನವನ್ನು ವಿಮಾ ಕಂಪನಿಯವರು ತಮ್ಮ ವಶಕ್ಕೆಪಡೆಯುತ್ತಾರೆ.
ಉದಾಹರಣೆಗೆ:2019ರ ಮಾದರಿಯ ಹುಂಡೈ ಐ20 ಬೆಲೆ ₹ 7.5 ಲಕ್ಷ ಇದೆ ಎಂದುಕೊಂಡರೆ, ಎಕ್ಸ್ ಷೋರೂಂ ಮೌಲ್ಯದಲ್ಲಿ ಶೇ 5ರಷ್ಟು ಕಡಿತವಾಗಿರುತ್ತದೆ. ಆಗ ಐಡಿವಿ ₹ 7 ಲಕ್ಷ ಆಗುತ್ತದೆ.ಕಾಂಪ್ರಹೆನ್ಸಿವ್ ವಿಮೆಯಲ್ಲಿ ಐಡಿವಿಯ ಶೇ 90ರಷ್ಟು, ಬಂಪರ್ ಟು ಬಂಪರ್ ವಿಮೆಯಲ್ಲಿ ಶೇ 100 ಪರಿಹಾರ ಸಿಗಲಿದೆ’ ಎಂದು ವಿವರಿಸಿದರು.
‘ಯಾವ ಕಾರಣದಿಂದ ಅನಾಹುತ ಸಂಭವಿಸಿದೆ ಎನ್ನುವುದು ಖಚಿತವಾಗಿಲ್ಲ. ಒಂದು ಕಾರಿನಲ್ಲಿದ್ದಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಈ ಅನಾಹುತ ಆಗಿದೆ ಎನ್ನುವ ಸುದ್ದಿ ಇದೆ. ಇದು ಖಚಿತವಾದರೆ, ಆ ಒಂದು ಕಾರಿನ ಪಾಲಿಸಿಯಿಂದಲೇ ಎಲ್ಲಾ ಕಾರುಗಳಿಗೆ ಆಗಿರುವ ಹಾನಿಗೂ ಪರಿಹಾರ ಪಡೆಯಬಹುದು. ಆದರೆ, ಇಂತಹ ಅನಾಹುತಗಳು ಸಂಭವಿಸಿದಾಗ ಅದಕ್ಕೆ ಸ್ಪಷ್ಟವಾದ ಕಾರಣ ಏನು ಎಂದು ತಿಳಿಯುವುದಿಲ್ಲ. ಹೀಗಾಗಿ ವೈಯಕ್ತಿಕವಾಗಿಯೇ ಎಲ್ಲರೂ ಕ್ಲೈಮ್ ಮಾಡಿಕೊಳ್ಳುತ್ತಾರೆ’ ಎಂದು ಹೇಳಿದರು.
‘ವಿಮೆಯನ್ನು ಪ್ರತಿವರ್ಷ ನವೀಕರಿಸಬೇಕು. ವಿಮೆ ಕಂತು ಕಟ್ಟದೇ ಬಾಕಿ ಉಳಿಸಿಕೊಂಡಿದ್ದರೆ ಆಗ ಒಂದು ರೂಪಾಯಿಯೂ ಪರಿಹಾರ ಸಿಗುವುದಿಲ್ಲ. ವಿಮೆಗೆ ಸಂಬಂಧಿಸಿದ ದಾಖಲೆ ಪತ್ರಗಳು ಅನಾಹುತದಲ್ಲಿ ನಾಶವಾಗಿದ್ದರೆ, ಅಂತಹ ಸಂದರ್ಭದಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ವಿಮಾ ಕಂಪನಿಗೆ ವಾಹನದ ಸಂಖ್ಯೆಯನ್ನು ನೀಡಿ ಪಾಲಿಸಿ ಸಂಖ್ಯೆ ಪಡೆಯಬಹುದು’ ಎಂದು ರತ್ನಕಲಾ ತಿಳಿಸಿದರು.
‘ವಿಮೆ ಪಡೆಯಲು ಕನಿಷ್ಠ ಮೂರರಿಂದ ನಾಲ್ಕು ವಾರಗಳು ಬೇಕು.ಸ್ಥಳದಲ್ಲಿಯೇ ಸಹಾಯ ಕೇಂದ್ರಗಳನ್ನು ಆರಂಭಿಸಲಾಗಿದೆ. ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ’ ಎಂದು ನ್ಯೂ ಇಂಡಿಯಾ ಅಶ್ಯೂರೆನ್ಸ್‌ನ ಉಪಪ್ರಧಾನ ವ್ಯವಸ್ಥಾಪಕ ಚಿರಂಜೀವಿ ರೆಡ್ಡಿ ತಿಳಿಸಿದರು.
ಸಾಮೂಹಿಕ ವಿಮೆ ಮಾಡಿಸಬೇಕಿತ್ತು: ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ ವಾಹನಗಳಿಗೆ ಸಂಘಟಕರ ಪರವಾಗಿ ಸಾಮೂಹಿಕ ವಿಮೆ ಮಾಡಿಸಿದ್ದರೆ ಪರಿಹಾರ ವಿತರಣೆ ಸುಲಭವಾಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.