ADVERTISEMENT

ಅನಿಲ ಸೋರಿಕೆ; ಹೋಟೆಲ್‌ನಲ್ಲಿ ಬೆಂಕಿ

ನಾಲ್ವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 21:51 IST
Last Updated 10 ಏಪ್ರಿಲ್ 2021, 21:51 IST
ಬೆಂಕಿ ಅವಘಡದಿಂದ ಸುಟ್ಟು ಹೋಗಿರುವ ಹೋಟೆಲ್
ಬೆಂಕಿ ಅವಘಡದಿಂದ ಸುಟ್ಟು ಹೋಗಿರುವ ಹೋಟೆಲ್   

ಬೆಂಗಳೂರು: ಕಾಮಾಕ್ಷಿಪಾಳ್ಯದ ತೋಟದ ರಸ್ತೆಯಲ್ಲಿರುವ ವಿನಾಯಕ್ ಹೋಟೆಲ್‌ನಲ್ಲಿ ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಅವಘಡ ಸಂಭವಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಹೋಟೆಲ್ ಮಾಲೀಕರಾದ ರಾಜಣ್ಣ (56), ಗಾಯತ್ರಿ (51), ಕೆಲಸಗಾರ ಭಾಸ್ಕರ್ ಹಾಗೂ ಗ್ರಾಹಕ ಗಂಗರಾಜು ಗಾಯಗೊಂಡವರು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಸಣ್ಣ ಶೆಡ್ ಹಾಕಿಕೊಂಡು ರಾಜಣ್ಣ ಹಾಗೂ ಕುಟುಂಬದವರು ಹೋಟೆಲ್ ನಡೆಸುತ್ತಿದ್ದರು. ಶನಿವಾರ ನಸುಕಿನಲ್ಲಿ ಹೋಟೆಲ್‌ನ ಬಾಗಿಲು ತೆರೆಯಲಾಗಿತ್ತು.ಬೆಳಿಗ್ಗೆಯಿಂದಲೇ ಗ್ರಾಹಕರು ಹೋಟೆಲ್‌ಗೆ ಬಂದು ಹೋಗುತ್ತಿದ್ದರು. ಬೆಳಿಗ್ಗೆ 11.30ರ ಸುಮಾರಿಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿತ್ತು. ಹೋಟೆಲ್ ಮಾಲೀಕರು ಸೇರಿ ಗ್ರಾಹಕರು ಗಾಯಗೊಂಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ಅನಿಲ ಸಿಲಿಂಡರ್ ಜೊತೆಯಲ್ಲೇ ಸೌದೆ ಒಲೆಯನ್ನೂ ಅಡುಗೆ ಮಾಡಲು ಬಳಸಲಾಗುತ್ತಿತ್ತು. ಶನಿವಾರವೂ ಒಂದೆಡೆ ಸೌದೆ ಒಲೆ ಉರಿಯುತ್ತಿತ್ತು. ಅತ್ತ, ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗುತ್ತಿತ್ತು. ಅದನ್ನು ಗಮನಿಸಿದ್ದ ಕೆಲಸಗಾರ, ಸಿಲಿಂಡರ್‌ ರೆಗ್ಯುಲೇಟರ್ ಸರಿಪಡಿಸಲು ಹೋದಾಗ ಬೆಂಕಿ ಹೊತ್ತಿಕೊಂಡಿತ್ತು.’

‘ಸೌದೆಯ ಒಲೆಯ ಬೆಂಕಿ ಜೊತೆ ಅನಿಲ ಸೇರಿ ಅವಘಡ ಸಂಭವಿಸಿದೆ. ಹೋಟೆಲ್ ಒಳಾಂಗಣದಲ್ಲಿ ಬೆಂಕಿ ಹೊತ್ತಿ ಉರಿದಿದೆ. ಪೀಠೋಪಕರಣ ಹಾಗೂ ಅಡುಗೆ ತಯಾರಿ ಸಾಮಗ್ರಿಗಳು ಸುಟ್ಟು ಹೋಗಿವೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.