ADVERTISEMENT

ಗೋದಾಮು ಬೆಂಕಿ ಅವಘಡ ಆಸ್ಪತ್ರೆಯಲ್ಲಿ ಕಾರ್ಮಿಕ ಸಾವು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 21:27 IST
Last Updated 14 ನವೆಂಬರ್ 2020, 21:27 IST

ಬೆಂಗಳೂರು: ಮೈಸೂರು ರಸ್ತೆಯ ಬಾಪೂಜಿನಗರದಲ್ಲಿದ್ದ ರಾಸಾಯನಿಕ ಕಾರ್ಖಾನೆ ಗೋದಾಮಿನಲ್ಲಿ ಇತ್ತೀಚೆಗೆ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕಾರ್ಮಿಕ ಬಿಜಯ್ (30) ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

ಬ್ಯಾಟರಾಯಪುರ ಠಾಣೆ ವ್ಯಾಪ್ತಿಯಲ್ಲಿ ನ. 10ರಂದು ಅವಘಡ ಸಂಭವಿಸಿತ್ತು. ಗೋದಾಮು ಸಂಪೂರ್ಣವಾಗಿ ಸುಟ್ಟಿತ್ತು. ಅಕ್ಕ–ಪಕ್ಕದ ಕಟ್ಟಡಗಳಿಗೂ ಹಾನಿ ಆಗಿತ್ತು. 10ಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿದ್ದವು.

ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅಕ್ರಮವಾಗಿ ಗೋದಾಮು ಮಾಡಿದ್ದ ರೇಖಾ ಕೆಮಿಕಲ್ಸ್ ಆ್ಯಂಡ್ ಅಸೋಸಿಯೇಷನ್ ಮಾಲೀಕರಾದ ಕಮಲಾ, ಅವರ ಪತಿ ಸಜ್ಜನ್ ರಾವ್ ಹಾಗೂ ಪುತ್ರ ಅನಿಲ್ ಎಂಬುವರನ್ನು ಬಂಧಿಸಿದ್ದರು.

ADVERTISEMENT

‘ಬಿಹಾರದ ಬಿಜಯ್, ಗೋದಾಮಿನಲ್ಲಿ ಕೆಲಸಕ್ಕೆ ಬಂದಿದ್ದ. ಟಿಪ್ಪರ್‌ನಲ್ಲಿ ತಂದಿದ್ದ ರಾಸಾಯನಿಕಗಳ ಡಬ್ಬಿಗಳೇ ಸ್ಫೋಟಕ್ಕೆ ಕಾರಣ. ಆ ರಾಸಾಯನಿಕಗಳನ್ನು ಟಿಪ್ಪರ್‌ನಿಂದ ಇಳಿಸಿ ಬ್ಯಾರಲ್‌ಗಳಿಗೆ ತುಂಬುವಂತೆ ಮಾಲೀಕರು ಹೇಳಿದ್ದರು.
ಅದರಂತೆ ಬಿಜಯ್, ಆ ಕೆಲಸದಲ್ಲಿ ನಿರತರಾಗಿದ್ದರು. ಅದೇ ವೇಳೆಯೇ ಗೋದಾಮಿನಲ್ಲಿ ಕಾಣಿಸಿಕೊಂಡಿದ್ದ ಬೆಂಕಿ, ಕ್ಷಣಮಾತ್ರದಲ್ಲಿ ಇಡೀ ಗೋದಾಮು ಆವರಿಸಿತ್ತು. ಬಿಜಯ್ ಸಹ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ದೇಹದ ಶೇ 50ಕ್ಕೂ ಹೆಚ್ಚು ಭಾಗ ಸುಟ್ಟಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಬೆಳಿಗ್ಗೆ ತೀರಿಕೊಂಡಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.