ADVERTISEMENT

ಪಟಾಕಿ: ಮಕ್ಕಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2020, 20:48 IST
Last Updated 17 ನವೆಂಬರ್ 2020, 20:48 IST

ಬೆಂಗಳೂರು: ದೀಪಾವಳಿ ಆಚರಣೆ ವೇಳೆ, ಪಟಾಕಿ ಸಿಡಿತದಿಂದ 50ಕ್ಕೂ ಹೆಚ್ಚು ಮಕ್ಕಳು ಕಣ್ಣಿಗೆ ಹಾನಿ ಮಾಡಿ
ಕೊಂಡಿದ್ದು ನಗರದ ನಾನಾ ಆಸ್ಪತ್ರೆಗಳಲ್ಲಿ ಹೊರ ಹಾಗೂ ಒಳ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ನಗರದ 12 ವರ್ಷದ ಬಾಲಕಿಗೆ ಹೂಕುಂಡ ಸಿಡಿದು ಮುಖ, ಕೈ ಹಾಗೂ ಕಣ್ಣುಗಳಿಗೆ ತೀವ್ರ ಹಾನಿಯಾಗಿದ್ದು, ಪ್ಲಾಸ್ಟಿಕ್ ಸರ್ಜರಿಗೆ ವೈದ್ಯರು ಸೂಚಿಸಿದ್ದಾರೆ.ಭಾನುವಾರ ರಾತ್ರಿ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಏಕಾಏಕಿ ಹೂಕುಂಡ ಸಿಡಿದು ಬಾಲಕಿಯ ಬಹುತೇಕ ಮುಖ ಸುಟ್ಟಿದ್ದು, ಕೈಗೂ ತೀವ್ರ ಗಾಯವಾಗಿದೆ. ಜತೆಗೆ ಕಣ್ಣಿಗೂ ಶೇ.50 ರಷ್ಟು ಹಾನಿಯಾಗಿದೆ.‌

ಬಾಲಕಿಗೆ ಪ್ರಾಥಮಿಕ ಚಿಕಿತ್ಸೆ ನೀಡಿರುವ ಮಿಂಟೋ ಆಸ್ಪತ್ರೆ ವೈದ್ಯರು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗಕ್ಕೆ ಬಾಲಕಿಯನ್ನು ವರ್ಗಾಯಿಸಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಮಾಡಲು ಸೂಚಿಸಲಾಗಿದೆ.

ADVERTISEMENT

ಕೋವಿಡ್ ಹಿನ್ನೆಲೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲು ಕರೊನಾ ಸೋಂಕು ಪರೀಕ್ಷೆ ಕಡ್ಡಾಯವಾಗಿದೆ. ಹಾಗಾಗಿ ಬಾಲಕಿಯ ಗಂಟಲು ದ್ರವ ಮಾದರಿ ತೆಗೆದು ಆರ್ ಟಿಪಿಸಿಆರ್ ಪರೀಕ್ಷೆಗೆ ಕಳಿಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ವೈದ್ಯರು ತಿಳಿಸಿದ್ದಾರೆ. ತಡರಾತ್ರಿ ಪಟಾಕಿ ಹಾನಿಗೊಳಗಾಗಿ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳು, ನಾರಾಯಣ ನೇತ್ರಾಲಯದಲ್ಲಿ 40 ವರ್ಷದ ಮಹಿಳೆ ಚಿಕಿತ್ಸೆ ಪಡೆದಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಸೋಮವಾರ ಮೂರು, ಶಂಕರದಲ್ಲಿ 14, ನಾರಾಯಣ ನೇತ್ರಾಲಯದಲ್ಲಿ 6, ನೇತ್ರಧಾಮದಲ್ಲಿ 3 ಹಾಗೂ ಶೇಖರ ಆಸ್ಪತ್ರೆಯಲ್ಲಿ 4 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.