ADVERTISEMENT

ಅತ್ಯಾಚಾರ ಆರೋಪಿ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 19:30 IST
Last Updated 12 ಫೆಬ್ರುವರಿ 2021, 19:30 IST

ಬೆಂಗಳೂರು: ಕದ್ದ ಕಾರಿನಲ್ಲಿ ಮಹಿಳೆಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಪರಾರಿಯಾಗಿದ್ದ ಇಮ್ರಾನ್ ಪಾಷಾ ಅಲಿಯಾಸ್ ಬೋಡಿಕೆಯನ್ನು (26) ಕಾಲಿಗೆ ಗುಂಡು ಹಾರಿಸಿ ಯಲಹಂಕ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ನೆಲಮಂಗಲ ರೇಣುಕಾನಗರದ ನಿವಾಸಿ ಇಮ್ರಾನ್, ರೌಡಿ ಶಬರೀಷ್‌ ಸಹಚರ. ಶಬರೀಷ್‌ನನ್ನು ಗುರುವಾರವಷ್ಟೇ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯಲಾಗಿತ್ತು. ಇದೀಗ ಇಮ್ರಾನ್‌ನನ್ನು ಸಹ ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಫೆ. 11ರಂದು ಯಲಹಂಕದಲ್ಲಿರುವ ಮಹಿಳೆಯೊಬ್ಬರ ಮನೆಗೆ ನುಗ್ಗಿದ್ದ ಆರೋಪಿ, ಅತ್ಯಾಚಾರ ಎಸಗಿ ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು.’

ADVERTISEMENT

‘ಎಂ.ಎಸ್.ಪಾಳ್ಯ ಜಂಕ್ಷನ್ ಬಳಿ ಆರೋಪಿ ಬೈಕ್‌ನಲ್ಲಿ ಹೊರಟಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಇನ್‌ಸ್ಪೆಕ್ಟರ್ ಅರುಣ್‌ಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಹೋಗಿತ್ತು. ಪೊಲೀಸರನ್ನು ನೋಡುತ್ತಿದ್ದಂತೆ ಪರಾರಿಯಾಗಲು ಯತ್ನಿಸಿದ್ದ ಆರೋಪಿ, ವೇಗವಾಗಿ ಬೈಕ್ ಚಲಾಯಿಸಿದ್ದ. ನಿಯಂತ್ರಣ ಕಳೆದುಕೊಂಡು ಕಳತೂರು ಫಾರಂ ಬಳಿ ಬೈಕ್‌ ಉರುಳಿಬಿದ್ದಿತ್ತು. ಹಿಡಿಯಲು ಹೋದ ಪೊಲೀಸ್ ಸಿಬ್ಬಂದಿ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್, ಆತನ ಕಾಲಿಗೆ ಗುಂಡು ಹೊಡೆದರು’ ಎಂದೂ ಮೂಲಗಳು ತಿಳಿಸಿವೆ.

‘ಸ್ಥಳದಲ್ಲೇ ಕುಸಿದು ಬಿದ್ದಿದ್ದ ಇಮ್ರಾನ್‌ನನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆತನಿಂದ ಹಲ್ಲೆಗೀಡಾಗಿರುವ ಸಿಬ್ಬಂದಿ ಮಧುಕುಮಾರ್ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದೂ ಮೂಲಗಳು ಹೇಳಿವೆ.

ಸುಲಿಗೆ ಪ್ರಕರಣದಲ್ಲೂ ಭಾಗಿ: ‘ಇಮ್ರಾನ್ ವಿರುದ್ಧ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ನೆಲಮಂಗಲ ಠಾಣೆಯ ರೌಡಿ ಪಟ್ಟಿಯಲ್ಲಿ ಆತನ ಹೆಸರು ಇರುವ ಬಗ್ಗೆ ಮಾಹಿತಿ ಇದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕೋಗಿಲು ಕ್ರಾಸ್ ಬಳಿ ಬುಧವಾರ ರಾತ್ರಿ ದೂರುದಾರ ನಾಗರಾಜ್ ಅವರ ಕಾರು ಅಡ್ಡಗಟ್ಟಿದ್ದ ಶಬರೀಷ್‌ ಹಾಗೂ ಸಹಚರರು, ಮೊಬೈಲ್, ನಗದು ಹಾಗೂ ಎಟಿಎಂ ಕಾರ್ಡ್‌ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಇಮ್ರಾನ್ ಸಹ ಭಾಗಿಯಾಗಿದ್ದ ಶಂಕೆ ಇದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.