ADVERTISEMENT

ಮನೆ ಬಾಗಿಲಿಗೆ ಮೀನು ಪೂರೈಕೆ: ಮತ್ಸ್ಯಸಂಪದ ಯೋಜನೆಗೆ ನಾಳೆ ಮುಖ್ಯಮಂತ್ರಿ ಚಾಲನೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 3:06 IST
Last Updated 20 ನವೆಂಬರ್ 2020, 3:06 IST
ಮೀನು
ಮೀನು   

ಬೆಂಗಳೂರು: ಆನ್‌ಲೈನ್‌ ಮೂಲಕ ಗ್ರಾಹಕರ ಮನೆ ಬಾಗಿಲಿಗೇ ತಾಜಾ ಮೀನು ಪೂರೈಕೆ ಮಾಡುವ ಯೋಜನೆ ಜಾರಿ ಮಾಡಲಾಗುವುದು ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಇದಕ್ಕಾಗಿ ಕೇಂದ್ರ ಸರ್ಕಾರ ಈ ಸಾಲಿನಲ್ಲಿ ₹137 ಕೋಟಿ ಹಣವನ್ನು ಮಂಜೂರು ಮಾಡಿದೆ ಎಂದು ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಮನೆ ಬಾಗಿಲಿಗೆ ಮೀನು ಪೂರೈಕೆ ಮಾಡುವ ಯೋಜನೆ ಕಾರ್ಯಗತಗೊಳಿಸಲು ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ. ಇದೇ 21 ರಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ‘ಪ್ರಧಾನಮಂತ್ರಿ ಮತ್ಸ್ಯಸಂಪದ’ ಯೋಜನೆಗೆ ಚಾಲನೆ ನೀಡಲಿದ್ದಾರೆ. ರಾಜ್ಯದಲ್ಲಿ ಮತ್ಸ್ಯಸಂಪದ ಯೋಜನೆ ಕಾರ್ಯಗತಗೊಳಿಸಲು 5 ವರ್ಷಗಳಿಗೆ ₹4,115 ಕೋಟಿ ಪ್ರಸ್ತಾವವನ್ನು ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಮತ್ಸ್ಯ ಸಂಪದ ಯೋಜನೆಯಡಿ ವಿಧಾನಸೌಧದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆಯಿಂದ ಮೀನು ಉತ್ಪಾದನೆ ಮತ್ತು ಮೀನು ಕೃಷಿಕರಿಗೆ ಲಾಭದಾಯಕವಾಗಲಿದೆ ಎಂದರು.

ಮುಂಬರುವ ದಿನಗಳಲ್ಲಿ ಮಂಗಳೂರು ಮೀನುಗಾರಿಕೆ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಮಾಡಲಾಗುವುದು. ಮೈಸೂರು, ಶಿವಮೊಗ್ಗ, ಅಂಕೋಲ, ಉಡುಪಿಯಲ್ಲಿ ಮೀನುಗಾರಿಕಾ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

‘ದೇಶದ ಮೀನುಗಾರಿಕೆಯಲ್ಲಿ ರಾಜ್ಯ 9 ನೇ ಸ್ಥಾನದಲ್ಲಿದೆ. ಸಮುದ್ರ ಮೀನುಗಾರಿಕೆಯಲ್ಲಿ 4 ನೇ ಸ್ಥಾನದಲ್ಲಿದೆ. ರಾಜ್ಯವು ಮೊದಲ ಸ್ಥಾನಕ್ಕೆ ತಲುಪಬೇಕು ಎಂಬುದು ನಮ್ಮ ಉದ್ದೇಶ’ ಎಂದರು.

ಮುಖ್ಯಮಂತ್ರಿಯವರ ಪರಮಾಧಿಕಾರ: ಸಚಿವ ಸಂಪುಟದಲ್ಲಿ ಯಾರನ್ನು ಇಟ್ಟುಕೊಳ್ಳಬೇಕು ಅಥವಾ ಬಿಡಬೇಕು ಎಂಬುದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟಿದ್ದು. ಅದು ಅವರ ಪರಮಾಧಿಕಾರ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ವಿಸ್ತರಣೆಯೋ, ಪುನಾರಚನೆಯೋ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ ಮತ್ತು ಕೇಂದ್ರದ ವರಿಷ್ಠರು ಸೇರಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇವರೆಲ್ಲ ಸೇರಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ. ಪುನಾರಚನೆಯಾದರೆ ಕೆಲವರನ್ನು ಕೈಬಿಡುವುದು ಸಹಜ. ಈ ವಿಷಯ ಪಕ್ಷದಲ್ಲಿ ಚರ್ಚೆಯಾಗುತ್ತಿದೆ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.