
ಬಸವನಗುಡಿಯ ಕಡಲೆಕಾಯಿ ಪರಿಷೆಯ ಕೊನೆಯ ದಿನವಾದ ಶುಕ್ರವಾರ ಭಾರಿ ಸಂಖ್ಯೆಯಲ್ಲಿ ಬಂದಿದ್ದ ಜನರು ದೊಡ್ಡ ಬಸವಣ್ಣ ರಸ್ತೆಯಲ್ಲಿ ಪರಿಷೆಯನ್ನು ಕಣ್ತುಂಬಿಕೊಂಡರು ಪ್ರಜಾವಾಣಿ ಚಿತ್ರ: ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರು: ಕಾರ್ತಿಕ ಮಾಸದ ಕೊನೆಯ ಸೋಮವಾರ ಆರಂಭವಾಗಿದ್ದ ಬಸವನಗುಡಿ ಕಡಲೆಕಾಯಿ ಪರಿಷೆ ಶುಕ್ರವಾರ ಮುಕ್ತಾಯವಾಯಿತು. 12 ಲಕ್ಷಕ್ಕೂ ಅಧಿಕ ಜನರು ಪರಿಷೆಗೆ ಭೇಟಿ ನೀಡಿ ಶೇಂಗಾ ಖರೀದಿಸಿದರು.
ಬಸವನಗುಡಿ ಮುಖ್ಯರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಡಲೆಕಾಯಿ ಮಾರಾಟ, ಖರೀದಿಯ ಸಂಭ್ರಮ ಮನೆಮಾಡಿತ್ತು. ಗುರುವಾರ ಒಂದೇ ದಿನ 6 ಲಕ್ಷ ಜನರು ಭೇಟಿ ನೀಡಿದ್ದರೆ, ಶುಕ್ರವಾರ ಈ ಸಂಖ್ಯೆ ದ್ವಿಗುಣಗೊಂಡಿತ್ತು.
ದೊಡ್ಡ ಬಸವಣ್ಣನೊಂದಿಗೆ ದೊಡ್ಡ ಗಣಪತಿ, ಕಾರಂಜಿ ಆಂಜನೇಯನ ದರ್ಶನ ಪಡೆದ ಜನರು ಜಾತ್ರೆಯ ಸೊಬಗನ್ನು ಸವಿದರು. ಮಧ್ಯೆ ಮಧ್ಯೆ ಮಳೆ ಬಂದಾಗ ಸ್ವಲ್ಪ ಹೊತ್ತು ಸಡಗರ ಕಡಿಮೆಯಾದರೂ ಮಳೆ ನಿಂತಾಗ ಮತ್ತದೇ ಸಂಭ್ರಮ ಪಡಿಮೂಡಿತು.
ಕಡಲಕಾಯಿ ಪರಿಷೆಯಲ್ಲಿ ಮೊದಲ ಬಾರಿಗೆ ವಿಶೇಷ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲಾಗಿತ್ತು. ಇದು ಭಕ್ತರನ್ನು ಸೆಳೆಯಿತು.
ನಾರ್ತ್ ರೋಡ್, ಕೆ.ಆರ್. ರಸ್ತೆ, ಆಶ್ರಮ ವೃತ್ತ, ಡಿವಿಜಿ ರಸ್ತೆ, ಗಾಂಧಿ ಬಜಾರ್ ಮುಖ್ಯರಸ್ತೆ, ನೆಟ್ಟಕಲ್ಲಪ್ಪ ಸರ್ಕಲ್ ರಸ್ತೆ, ಎನ್.ಆರ್. ಕಾಲೊನಿ ರಸ್ತೆಯಲ್ಲಿನ ದೀಪಾಲಂಕಾರಗಳು ಜಗಮಗಿಸಿದವು.
4,500ಕ್ಕೂ ಅಧಿಕ ಮಳಿಗೆಗಳಿದ್ದ ಪರಿಷೆ ಮುಕ್ತಾಯವಾಗುತ್ತಿದ್ದಂತೆ ಸ್ವಚ್ಛತಾ ಕಾರ್ಯ ಆರಂಭವಾಗಿದೆ ಎಂದು ಪರಿಷೆ ಆಯೋಜಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.