ADVERTISEMENT

ಬ್ಯಾಡರಹಳ್ಳಿಯಲ್ಲಿ ಐವರು ಮೃತಪಟ್ಟ ಪ್ರಕರಣ; ಹಲ್ಲೇಗೆರೆ ಶಂಕರ್‌ ಸೇರಿ ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 10:13 IST
Last Updated 1 ಅಕ್ಟೋಬರ್ 2021, 10:13 IST
ಹಲ್ಲೇಗೆರೆ ಶಂಕರ್
ಹಲ್ಲೇಗೆರೆ ಶಂಕರ್   

ಬೆಂಗಳೂರು: ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟ ಪ್ರಕರಣದಲ್ಲಿ ಹಲ್ಲೇಗೆರೆ ಶಂಕರ್ ಸೇರಿ ಮೂವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ತಿಗಳರಪಾಳ್ಯದಲ್ಲಿ ಭಾರತಿ (51), ಅವರ ಮಕ್ಕಳಾದ ಸಿಂಚನಾ (34), ಸಿಂಧುರಾಣಿ (33) ಹಾಗೂ ಮಧುಸಾಗರ್ (25) ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಂಧೂರಾಣಿ ಅವರ ಒಂಬತ್ತು ತಿಂಗಳ ಮಗು ಸಹ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮಗುವಿನ ಕೊಲೆ ನಡೆದಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿತ್ತು.

‘ಪತ್ನಿ ಹಾಗೂ ಮಕ್ಕಳ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದಡಿ ಹಲ್ಲೇಗೆರೆ ಶಂಕರ್, ಅವರ ಅಳಿಯಂದಿರಾದ ಶ್ರೀಕಾಂತ್ ಹಾಗೂ ಪ್ರದೀಪ್‌ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಪ್ರದೀಪ್ ತಂದೆ–ತಾಯಿಯನ್ನೂ ಆರೋಪಿಯನ್ನಾಗಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಶಂಕರ್, ಶ್ರೀಕಾಂತ್ ಹಾಗೂ ಪ್ರದೀಪ್ ಅವರನ್ನು ಸದ್ಯ ಬಂಧಿಸಲಾಗಿದೆ. ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನಂತರ, ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರನ್ನು ಕೋರಲಾಗುವುದು. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿದರು.

‘ಶಂಕರ್ ಹಾಗೂ ಅಳಿಯಂದಿರು, ಮೃತರಿಗೆ ಕಿರುಕುಳ ನೀಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅವರ ಕಿರುಕುಳದಿಂದ ಬೇಸತ್ತು ಭಾರತಿ ಹಾಗೂ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.