
ಜೆಡಿಎಸ್
ಬೆಂಗಳೂರು: ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಸೇರಿದಂತೆ ಐವರನ್ನು ಜೆಡಿಎಸ್ ರಾಜ್ಯ ಘಟಕದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಆದೇಶ ಹೊರಡಿಸಿದ್ದಾರೆ.
ಶಾಸಕರಾದ ಸಿ.ಬಿ. ಸುರೇಶ್ ಬಾಬು, ಭೀಮಗೌಡ ಬಸನಗೌಡ ಪಾಟೀಲ, ಮಾಜಿ ಸಚಿವ ಸಾ.ರಾ. ಮಹೇಶ್ ಮತ್ತು ಮಾಜಿ ಶಾಸಕ ದೊಡ್ಡಪ್ಪಗೌಡ ಶಿವಲಿಂಗಪ್ಪ ನರಬೋಳ ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ಮತ್ತು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಅವರನ್ನು ಮಹಾ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಸೋಮವಾರವಷ್ಟೇ ಪಕ್ಷ ಸೇರಿದ ನಿವೃತ್ತ ಐಪಿಎಸ್ ಅಧಿಕಾರಿ ಜ್ಯೋತಿ ಪ್ರಕಾಶ್ ಮಿರ್ಜಿ ಸೇರಿದಂತೆ ನಾಲ್ವರು ಹಿರಿಯ ಉಪಾಧ್ಯಕ್ಷರು, ಏಳು ಮಂದಿ ಉಪಾಧ್ಯಕ್ಷರು, ವಕೀಲ ಎ.ಪಿ. ರಂಗನಾಥ್ ಸೇರಿದಂತೆ ಹತ್ತು ಮಂದಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹತ್ತು ಮಂದಿ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಖಜಾಂಚಿಯಾಗಿ ಶಾಸಕ ಬಿ.ಎನ್. ರವಿಕುಮಾರ್ ಅವರನ್ನು ನೇಮಿಸಲಾಗಿದೆ.
ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷರಾಗಿ ಮಾಜಿ ಶಾಸಕ ಕೆ. ಅನ್ನದಾನಿ, ಮಹಿಳಾ ವಿಭಾಗದ ಅಧ್ಯಕ್ಷರಾಗಿ ಮಾಲೂರಿನ ರಶ್ಮಿ ರಾಮೇಗೌಡ ಮತ್ತು ಯುವ ಜನತಾದಳದ ರಾಜ್ಯ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ರಾಜು ನಾಯಕ ಅವರನ್ನು ನೇಮಕ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.