ADVERTISEMENT

ಸೀಲ್‍ಡೌನ್ ಸಡಿಲಿಸಿ ವ್ಯಾಪಾರಕ್ಕೆ ಅನುಮತಿ ನೀಡಿ:ಎಫ್‍ಕೆಸಿಸಿಐ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 19:41 IST
Last Updated 24 ಜುಲೈ 2020, 19:41 IST
ಸಿ.ಆರ್.ಜನಾರ್ಧನ್
ಸಿ.ಆರ್.ಜನಾರ್ಧನ್   

ಬೆಂಗಳೂರು: ನಗರದ ಪ್ರಮುಖ ವ್ಯಾಪಾರ ಸ್ಥಳಗಳಲ್ಲಿ ಸೀಲ್‍ಡೌನ್ ಮಾಡಿರುವ ಆದೇಶವನ್ನು ಪಾಲಿಕೆ ರದ್ದುಪಡಿಸಬೇಕು. ವ್ಯಾಪಾರಿಗಳು ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು ವ್ಯಾಪಾರ ನಡೆಸಲು ಅನುಮತಿ ನೀಡಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ) ಒತ್ತಾಯಿಸಿದೆ.

ಈ ವಿಚಾರವಾಗಿ ಎಫ್‍ಕೆಸಿಸಿಐ ಅಧ್ಯಕ್ಷ ಸಿ.ಆರ್.ಜನಾರ್ಧನ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರನ್ನು ಶುಕ್ರವಾರ ಭೇಟಿಯಾಗಿ ಚರ್ಚಿಸಿದರು.

'ಜೆ.ಸಿ.ರಸ್ತೆ, ಕಲಾಸಿಪಾಳ್ಯ ಮುಖ್ಯ ರಸ್ತೆ, ಕೆ.ಆರ್.ಮಾರುಕಟ್ಟೆ, ತರಗುಪೇಟೆ, ಸುಲ್ತಾನ್ ಪೇಟೆ, ಎಸ್.ಜೆ.ಪಿ ರಸ್ತೆಯೂ ಸೇರಿ ನಗರದಲ್ಲಿ ವ್ಯಾಪಾರದ ಕೇಂದ್ರ ಭಾಗಗಳನ್ನು ಸೋಂಕು ನಿಯಂತ್ರಣಕ್ಕಾಗಿ ಪಾಲಿಕೆ ಸೀಲ್‍ಡೌನ್ ಮಾಡಿದೆ. ಆದರೆ, ಈವೆರೆಗೆ ಸೀಲ್‍ಡೌನ್ ತೆರವಾಗದ ಕಾರಣ ಅಲ್ಲಿನ ವ್ಯಾಪಾರಕ್ಕೆ ತೀವ್ರ ಪೆಟ್ಟು ಬಿದ್ದಂತಾಗಿದೆ. ಬಹುತೇಕ ವಾಣಿಜ್ಯ ಸಂಸ್ಥೆಗಳು ನಷ್ಟ ಕೂಪದಲ್ಲಿ ಸಿಲುಕಿವೆ' ಎಂದು ಸಿ.ಆರ್.ಜನಾರ್ಧನ್ ವಿವರಿಸಿದರು.

ADVERTISEMENT

'ಪಾಲಿಕೆ ಅಧಿಸೂಚನೆಯನ್ನು ರದ್ದುಪಡಿಸುವ ಮೂಲಕ ಈ ಸ್ಥಳಗಳಲ್ಲಿ ವ್ಯಾಪಾರ ಆರಂಭಿಸಲು ಅನುಮತಿ ನೀಡಬೇಕು. ಇದಕ್ಕಾಗಿ ಅಗತ್ಯ ಮಾರ್ಗಸೂಚಿ ಹೊರಡಿಸಬೇಕು' ಎಂದು ಮನವಿ ಮಾಡಿದರು.

'ಇದಕ್ಕೆ ಪ್ರತಿಕ್ರಿಯಿಸಿದ ಟಿ.ಎಂ. ವಿಜಯ ಭಾಸ್ಕರ್ ಅವರು, ಸೀಲ್‍ಡೌನ್ ಅಧಿಸೂಚನೆಯನ್ನು ಸಡಿಲಿಸಲು ಪಾಲಿಕೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಕೆಲವು ದಿನಗಳವರೆಗೆ ಒಂದು ದಿನ ಎಡಭಾಗ ಹಾಗೂ ಮತ್ತೊಂದು ದಿನ ಬಲ ಭಾಗದ ಅಂಗಡಿ ತೆರೆಯುವ ಮೂಲಕ ಜನರ ದಟ್ಟಣೆ ನಿಯಂತ್ರಿಸಲು ಸೂಚಿಸಿ ಅನುಮತಿ ನೀಡುವ ಭರವಸೆ ನೀಡಿದ್ದಾರೆ' ಎಂದು ಜನಾರ್ಧನ್‌‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.