ADVERTISEMENT

ಕಲ್ಲು ಎತ್ತಿ ಹಾಕಿ ಕೊಲೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 21:58 IST
Last Updated 17 ಜೂನ್ 2021, 21:58 IST
   

ಬೆಂಗಳೂರು: ರಾಜಗೋಪಾಲನಗರ ಠಾಣೆ ವ್ಯಾಪ್ತಿಯ ಜಿಕೆಡಬ್ಲ್ಯು ಲೇಔಟ್‌ನಲ್ಲಿ ನಡೆದಿದ್ದ ಕಾರ್ತಿಕ್ (42) ಎಂಬುವರ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಗಳಾದ ಮೋಹನ್ ಹಾಗೂ ನಾಗರಾಜು ಬಂಧಿತರು. ಅವರಿಬ್ಬರು ರಿಯಲ್ ಎಸ್ಟೇಟ್ ಏಜೆಂಟ್‌ಗಳು’ ಎಂದು ಪೊಲೀಸರು ಹೇಳಿದರು.

‘ಕೊಲೆಯಾದ ಕಾರ್ತಿಕ್‌, ಆರೋಪಿಗಳ ಮಧ್ಯಸ್ಥಿಕೆಯಲ್ಲಿ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ಫ್ಲ್ಯಾಟ್ ಖರೀದಿಸಿದ್ದರು. ಅರ್ಧ ಹಣ ಮಾತ್ರ ನೀಡಿ, ಉಳಿದ ಹಣ ಕೊಡದೇ ಸತಾಯಿಸುತ್ತಿದ್ದರು. ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದಾಗಿ ಹೇಳುತ್ತಿದ್ದರು. ಅದರಿಂದಾಗಿ ಫ್ಲ್ಯಾಟ್‌ನ ಮೂಲ ಮಾಲೀಕರು, ಆರೋಪಿಗಳಿಗೆ ಕಮಿಷನ್ ನೀಡಿರಲಿಲ್ಲ. ಪೂರ್ತಿ ಹಣ ವಸೂಲಿ ಮಾಡಿ ಕೊಡುವಂತೆ ಮಾಲೀಕರು ತಾಕೀತು ಮಾಡಿದ್ದರು.’

ADVERTISEMENT

‘ಹಣ ನೀಡದಿದ್ದರಿಂದ ಕೋಪಗೊಂಡಿದ್ದ ಆರೋಪಿಗಳು, ಕಾರ್ತಿಕ್‌ ಸಂಚರಿಸುವ ರಸ್ತೆಯನ್ನು ಬಂದ್ ಮಾಡಿದ್ದರು. ಇದೇ ವಿಚಾರವಾಗಿ ಗಲಾಟೆ ನಡೆದಿತ್ತು. ಆ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಆಗ ಕಾರ್ತಿಕ್, ‘ಮಧ್ಯವರ್ತಿಗಳು ಬೇಡ. ನಾವೇ ವ್ಯವಹಾರ ಬಗೆಹರಿಸಿಕೊಳ್ಳೋಣ’ ಎಂದು ಮಾಲೀಕರ ಜೊತೆ ಸಂಧಾನ ಮಾಡಿಕೊಳ್ಳಲು ಮುಂದಾಗಿದ್ದರು. ಆ ವಿಷಯ ತಿಳಿಯುತ್ತಿದ್ದಂತೆ ಆರೋಪಿಗಳು, ಕಾರ್ತಿಕ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದಿದ್ದರು. ಈ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.