ADVERTISEMENT

ಜಾಹೀರಾತು ನಿಷೇಧ ನಿರ್ಣಯ ರದ್ದು

ಏಕಪಕ್ಷೀಯ ನಿರ್ಧಾರ ಎಂದ ಏಕಸದಸ್ಯ ನ್ಯಾಯಪೀಠ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 19:45 IST
Last Updated 6 ಫೆಬ್ರುವರಿ 2019, 19:45 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಒಂದು ವರ್ಷ ಕಾಲ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ಎಲ್ಲ ಮಾದರಿಯ ಜಾಹೀರಾತು ಫಲಕಗಳ ಅಳವಡಿಕೆ ನಿಷೇಧಕ್ಕೆ ಸಂಬಂಧಿಸಿದಂತೆ 2018ರ ಆಗಸ್ಟ್ 6 ರಂದು ಬಿಬಿಎಂಪಿ ಕೈಗೊಂಡಿರುವ ನಿರ್ಣಯವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ನಿರ್ಣಯ ಪ್ರಶ್ನಿಸಿ ಜಾಹೀರಾತು ಕಂಪನಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುನಿಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.

‘ಹೊಸ ಜಾಹೀರಾತು ನೀತಿ ಹಾಗೂ ಬೈ–ಲಾಗಳನ್ನು ರಚಿಸುವ ಉದ್ದೇಶದಿಂದ ಈ ನಿರ್ಣಯ ಹೊರಡಿಸಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ಆದರೆ, ಹೊಸ ನಿಯಮಗಳನ್ನು ರಚಿಸುವವರೆಗೆ ಚಾಲ್ತಿಯಲ್ಲಿರುವ 2006 ಬೈ–ಲಾಗಳ ನಿಯಮ ಹಾಗೂ ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಅಮಾನತಿನಲ್ಲಿರಿಸಲು ಸಾಧ್ಯವಿಲ್ಲ. ಅಕ್ರಮ ಜಾಹೀರಾತು ಫಲಕಗಳೂ ಸೇರಿದಂತೆ ಎಲ್ಲ ಬಗೆಯ ಜಾಹೀರಾತು ಫಲಕಗಳ ಅಳವಡಿಕೆ ನಿಷೇಧಿಸಿದ ಬಿಬಿಎಂಪಿ ನಿರ್ಣಯ ಅರ್ಜಿದಾರರ ಹಕ್ಕುಗಳನ್ನು ಕಾನೂನಾತ್ಮಕವಾಗಿ ಉಲ್ಲಂಘಿಸಿದಂತಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.

‘ಬಿಬಿಎಂಪಿಯು ಈ ನಿರ್ಣಯ ಏಕಪಕ್ಷೀಯವಾಗಿದೆ. ಹೊಸ ಜಾಹೀರಾತು ನೀತಿ ರೂಪಿಸುವತನಕ ಚಾಲ್ತಿಯಲ್ಲಿರುವ 2006ರ ಜಾಹೀರಾತು ಬೈ–ಲಾಗಳನ್ನು ಹಾಗೂ ಅರ್ಜಿದಾರರ ಮೂಲಭೂತ ವಾಣಿಜ್ಯ ಹಕ್ಕುಗಳನ್ನು ಅಮಾನತ್ತಿನಲ್ಲಿ ಇರಿಸಲು ಸಾಧ್ಯವಿಲ್ಲ. ಹೊಸ ನೀತಿ ಜಾರಿಗೆ ಬರುವವರೆಗೂ ಹಳೆಯ ನಿಯಮಗಳನ್ನೇ ಮುಂದುವರಿಸಬೇಕಿತ್ತು’ ಎಂದು ಆದೇಶದಲ್ಲಿತಿಳಿಸಲಾಗಿದೆ.

‘ಈ ಆದೇಶವು ಅಕ್ರಮ ಜಾಹೀರಾತುಗಳ ಪ್ರದರ್ಶನದ ವಿರುದ್ಧ ಬಿಬಿಎಂಪಿ ಕೈಗೊಳ್ಳುವ ಅಧಿಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಚಾಲ್ತಿಯಲ್ಲಿರುವ 2006ರ ಬೈಲಾಗಳ ಪ್ರಕಾರ ಅಕ್ರಮ ಜಾಹೀರಾತುಗಳ ಮೇಲೆ ಬಿಬಿಎಂಪಿ ಸೂಕ್ತ ಕ್ರಮ ಜರುಗಿಸಲು ಮುಕ್ತವಾಗಿದೆ’ ಎಂದೂವಿವರಿಸಲಾಗಿದೆ.

‘ಹೊಸ ಜಾಹೀರಾತು ನೀತಿ ಜಾರಿ ವಿಧಾನವು ಜಾಹೀರಾತುದಾರರ ವಾಣಿಜ್ಯ ಹಕ್ಕುಗಳನ್ನು ಮೊಟಕುಗೊಳಿಸದಂತೆ ಇರಬೇಕು’ ಎಂದು ಆದೇಶದಲ್ಲಿತಿಳಿಸಿದೆ.

ಅರ್ಜಿದಾರರ ವಾದಾಂಶ: ‘ಜಾಹಿರಾತು ಪ್ರದರ್ಶನವು, ಸಂವಿಧಾನದ 19 () (ಎ) ವಿಧಿಯ ಪ್ರಕಾರ ಅಭಿವ್ಯಕ್ತಿ ಸ್ವಾತಂತ್ರ್ಯದ ವಾಪ್ತಿಗೆ ಒಳಪಡುತ್ತದೆ. ವಾಣಿಜ್ಯ ಉದ್ದೇಶದ ಜಾಹಿರಾತು ಪ್ರದರ್ಶನವನ್ನು ‘ವಾಣಿಜ್ಯ ಅಭಿವ್ಯಕ್ತಿ’ (ಕಮರ್ಷಿಯಲ್ ಸ್ಪೀಚ್) ಎಂದೇ ವ್ಯಾಖ್ಯಾನಿಸಲಾಗಿದೆ. ಇದರ ಅನುಸಾರ ಕಾನೂನುಬದ್ಧ ಜಾಹಿರಾತು ಪ್ರದರ್ಶನವನ್ನು ನಿಷೇಧಿಸಲು ಅವಕಾಶವಿಲ್ಲ’ ಎಂಬುದು ಅರ್ಜಿದಾರರ ಪ್ರಮುಖ ವಾದಾಂಶವಾಗಿತ್ತು.

‘ಕೌನ್ಸಿಲ್ ಸಭೆಯ ನಿರ್ಣಯ ಕಾನೂನು ಅಲ್ಲ. ಅರ್ಜಿದಾರರು ಕಾನೂನು ಬದ್ಧ ಪರವಾನಗಿ ಪಡೆದುಕೊಂಡಿದ್ದಾರೆ. ಈ ಜಾಹಿರಾತುದಾರರು ಅಳವಡಿಸಿರುವ ಜಾಹಿರಾತು ಫಲಕಗಳು ಖಾಸಗಿ ಸ್ಥಿರಾಸ್ತಿಗಳಲ್ಲಿವೆ ಮತ್ತು ಕಾಲಕಾಲಕ್ಕೆ ಎಲ್ಲ ರೀತಿಯ ತೆರಿಗೆ, ಶುಲ್ಕಗಳನ್ನು ನಿಯಮಿತವಾಗಿ ಪಾವತಿಸಲಾಗುತ್ತಿದೆ’ ಎಂದು ಅರ್ಜಿದಾರರು ನ್ಯಾಯಪೀಠಕ್ಕೆ ಅರುಹಿದ್ದರು.

‘ಜೀವಿಸುವ ಹಕ್ಕು ಉಲ್ಲಂಘನೆ’

ಬಿಬಿಎಂಪಿ ಜಾಹಿರಾತು ನಿಷೇಧ ಮಾಡಿರುವುದು ಸಂವಿಧಾನದ 21ನೇ ವಿಧಿಯ ಅನುಸಾರ ‘ಜೀವಿಸುವ ಹಕ್ಕಿನ’ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರ ‍ಪರ ವಕೀಲರು ಆರೋಪಿಸಿದ್ದರು.

ಅರ್ಜಿದಾರ ಕಂಪನಿಗಳ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ‘ನಗರದಲ್ಲಿ 2 ಸಾವಿರಕ್ಕೂ ಹೆಚ್ಚು ಜಾಹಿರಾತು ಸಂಸ್ಥೆಗಳಿವೆ. 1.50 ಲಕ್ಷ ಕುಟುಂಬಗಳು ಈ ಉದ್ಯಮವನ್ನು ನೆಚ್ಚಿಕೊಂಡಿವೆ. ಆದರೆ ಬಿಬಿಎಂಪಿ ನಿರ್ಣಯದಿಂದ ಆರು ತಿಂಗಳಿಂದ ಇವರ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿದೆ ’ ಎಂದು ಆರೋಪಿಸಿದ್ದರು.

***

ಬಿಬಿಎಂಪಿ ನಿರ್ಣಯ ಅರ್ಜಿದಾರರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ.

- ಎಸ್‌.ಸುನಿಲ್‌ ದತ್‌ ಯಾದವ್‌, ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.