ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಲಾಲ್‌ಬಾಗ್ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ‘ಆದಿಕವಿ ಮಹರ್ಷಿ ವಾಲ್ಮೀಕಿ’ ವಿಷಯ ಆಧಾರಿತ ಫಲಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆಬಿತ್ತು. 12 ದಿನ ನಡೆದ ಈ ಫಲಪುಷ್ಪ ಪ್ರದರ್ಶನಕ್ಕೆ ಒಟ್ಟು 4.75 ಲಕ್ಷ ಜನ ಭೇಟಿ ನೀಡಿದ್ದು, ₹2.26 ಕೋಟಿ ಪ್ರವೇಶ ಶುಲ್ಕ ಸಂಗ್ರಹವಾಗಿದೆ.
ಗಾಜಿನ ಮನೆಯ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಅವರ ಜೀವನ ಗಾಥೆಯನ್ನು ಬಣ್ಣ–ಬಣ್ಣದ ಹೂಗಳಲ್ಲಿ ಅನಾವರಣ ಮಾಡಲಾಗಿತ್ತು. ಜನವರಿ 16ರಿಂದ 27ರವರೆಗೆ ನಡೆದ ಈ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ನಿತ್ಯವೂ ಲಕ್ಷಾಂತರ ಜನ ಭಾಗವಹಿಸಿದ್ದರು.
ಬೃಹತ್ ಹುತ್ತದ ಮಾದರಿ, ರಾಮಾಯಣ ಮಹಾಕಾವ್ಯದಲ್ಲಿ ವನವಾಸದ ಸಂದರ್ಭದಲ್ಲಿ ಪಂಚವಟಿಯಲ್ಲಿ ತಂಗಿದ್ದ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರ 3ಡಿ ಕಲಾಕೃತಿಗಳು, ಹುಲ್ಲಿನ ಗುಡಿಸಲು ಮತ್ತು ಅರಣ್ಯ ಪರಿಸರದ ಮಾದರಿ ನಿರ್ಮಿಸಲಾಗಿತ್ತು. ಇದನ್ನು ವೀಕ್ಷಿಸಲು ಲಕ್ಷಾಂತರ ಮಂದಿ ದೇಶ–ವಿದೇಶಗಳಿಂದ ಬಂದಿದ್ದರು.
‘ಅಂತಿಮ ದಿನವಾದ ಸೋಮವಾರ 37,890 ಜನ ಫಲಪುಷ್ಪ ಪ್ರದರ್ಶನ ವೀಕ್ಷಿಸಿದರು. ₹7.08 ಲಕ್ಷ ಪ್ರವೇಶ ಶುಲ್ಕ ಸಂಗ್ರಹವಾಗಿದೆ. 12 ದಿನಗಳ ಈ ಫಲಪುಷ್ಪ ಪ್ರದರ್ಶನಕ್ಕೆ 4,75,890 ಜನ ಭೇಟಿ ನೀಡಿದ್ದು, ಪ್ರವೇಶ ಶುಲ್ಕ, ಮಳಿಗೆ ಬಾಡಿಗೆ, ಪ್ರದರ್ಶನ ಪ್ರವೇಶ ಶುಲ್ಕ ಸೇರಿ ಒಟ್ಟು ₹2.26 ಕೋಟಿ ವರಮಾನ ಸಂಗ್ರಹವಾಗಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಸ್ಯಕಾಶಿಯಲ್ಲಿ ಕಸದ ರಾಶಿ ಲಾಲ್‌ಬಾಗ್‌ನಲ್ಲಿ ಎತ್ತ ನೋಡಿದರೂ ಚೆಲ್ಲಾಪಿಲ್ಲಿಯಾಗಿ ಹರಡಿದ ಕಸ ತಿಂದು ಬಿಸಾಡಿದ ದೊನ್ನೆಗಳ ರಾಶಿ ಕಂಡುಬರುತ್ತಿದೆ. ಫಲಪುಷ್ಪ ಪ್ರದರ್ಶನ ಮುಕ್ತಾಯವಾಗಿದ್ದರೂ ವಾಯುವಿಹಾರಿಗಳು ಸಾಗುವ ರಸ್ತೆ ಪಾದಚಾರಿ ಮಾರ್ಗಗಳು ಉದ್ಯಾನದ ಹಸಿರು ಹೊದಿಕೆಯ ಮೇಲೆ ಜನರು ಬಿಸಾಡಿಹೋದ ತ್ಯಾಜ್ಯದ ರಾಶಿಬಿದ್ದಿದೆ. ಗಾಜಿನ ಮನೆಯ ಎದುರಿಗಿದ್ದ ತಾತ್ಕಾಲಿಕ ಅಂಗಡಿ ಮಳಿಗೆಗಳನ್ನು ಖಾಲಿ ಮಾಡಲಾಗಿದ್ದು ಅವುಗಳಲ್ಲಿ ಇದ್ದ ಕಸವನ್ನೆಲ್ಲ ಅಲ್ಲಿಯೇ ಹರಡಿ ಹೋಗಿದ್ದರು. ಆಹಾರ ಪದಾರ್ಥ ಸೇವಿಸಿದವರು ಕಾಗದದ ಮತ್ತು ಅಡಿಕೆ ತಟ್ಟೆಗಳನ್ನು ಎಸೆದು ಹೋಗಿದ್ದರು. ‘ಲಾಲ್‌ಬಾಗ್ ಅನ್ನು ಈ ರೀತಿ ನೋಡಲು ಅತ್ಯಂತ ಬೇಸರವಾಗುತ್ತಿದೆ. ಅದನ್ನು ಹಾಳು ಮಾಡುವ ಪ್ರಯತ್ನವನ್ನು ಯಾರೂ ಮಾಡಬಾರದು. ಇದೊಂದು ಹೇಯ ಕೃತ್ಯ’ ಎಂದು ವಾಯುವಿಹಾರಿಗಳು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.