ಪ್ರಾತಿನಿಧಿಕ ಚಿತ್ರ
ಬೆಂಗಳೂರು: ರಾಮನಗರ ಜಿಲ್ಲಾ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರ ಭ್ರೂಣಲಿಂಗ ಪತ್ತೆ ಮಾಡಿ, ಬೆಂಗಳೂರಿನ ಕ್ಲಿನಿಕ್‌ವೊಂದರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಭ್ರೂಣ ತೆಗೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ಪಶ್ಚಿಮ ವಿಭಾಗದ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬ್ಯಾಟರಾಯನಪುರದ ಡ್ಯಾನಿಶ್ ಕ್ಲಿನಿಕ್‌ನ ವೈದ್ಯೆ ಪಲ್ಲವಿ, ಪ್ರಮುಖ ಮಧ್ಯವರ್ತಿಯೂ ಆಗಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಶಾರದಮ್ಮ, ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಹಾಗೂ ಭಾಗಮ್ಮ ಹಾಗೂ ಭ್ರೂಣಲಿಂಗ ಪತ್ತೆ ಮಾಡಿಸಿಕೊಂಡ ಬೆಂಗಳೂರಿನ ತಾತಗುಣಿಯ ಮಹಿಳೆಯ ಪತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭ್ರೂಣಲಿಂಗ ಪತ್ತೆ ಹಾಗೂ ಶಸ್ತ್ರಚಿಕಿತ್ಸೆ ಮೂಲಕ ಭ್ರೂಣ ತೆಗೆಯಲು ದಂಪತಿಯಿಂದ ಆರೋಪಿಗಳು ಒಟ್ಟು ₹42 ಸಾವಿರ ಪಡೆದುಕೊಂಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಮೂಲಗಳು ಹೇಳಿವೆ.
ಪ್ರಕರಣ ಗೊತ್ತಾದ ಬಳಿಕ ಆರೋಗ್ಯ ಇಲಾಖೆಯ ಪ್ರಸವಪೂರ್ವ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ತಡೆ (ಪಿಸಿ ಆ್ಯಂಡ್ ಪಿಎನ್‌ಡಿಟಿ) ಕಾರ್ಯಕ್ರಮದ ಉಪ ನಿರ್ದೇಶಕರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸ್ಕ್ಯಾನಿಂಗ್ ವಿಭಾಗದ ರೆಡಿಯಾಲಜಿಸ್ಟ್ ಮತ್ತು ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದರು ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.