ADVERTISEMENT

ವಿದ್ಯಾರ್ಥಿಗಳು ವಿಶ್ವಜ್ಯೋತಿಗಳಾಗಲಿ: ಜಾನಪದ ಗಾಯಕ ಜೋಗಿಲ ಸಿದ್ಧರಾಜು

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 14:10 IST
Last Updated 28 ಸೆಪ್ಟೆಂಬರ್ 2025, 14:10 IST
ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ನಡೆದ ‘ಕನ್ನಡ ಹಬ್ಬ-2025’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು
ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ನಡೆದ ‘ಕನ್ನಡ ಹಬ್ಬ-2025’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಗಣ್ಯರು ಭಾಗವಹಿಸಿದ್ದರು   

ಬೆಂಗಳೂರು: ಜಾನಪದ ಪರಂಪರೆಯಲ್ಲಿ ತಾಯಂದಿರು ಹೇಳಿರುವ ‘ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿಗೆ ಚೂಡಾಮಣಿಯಾಗು, ಜಗಕ್ಕೆ ಜ್ಯೋತಿಯೇ ಆಗು’ ಎಂಬ ಮಾತಿನಂತೆ ವಿದ್ಯಾರ್ಥಿಗಳು ವಿಶ್ವಜ್ಯೋತಿಗಳಾಗಬೇಕು ಎಂದು ಜಾನಪದ ಗಾಯಕ ಜೋಗಿಲ ಸಿದ್ಧರಾಜು ಅಭಿಪ್ರಾಯಪಟ್ಟರು.

ನಗರದ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಕನ್ನಡ ಹಬ್ಬ-2025’ ಕಾರ್ಯಕ್ರಮ ಉದ್ಘಾಟಿಸಿ, ಭಿತ್ತಿಚಿತ್ರ ಪ್ರದರ್ಶನ ಬಿಡುಗಡೆಗೊಳಿಸಿ ಮಾತನಾಡಿದರು.

‘ಜಗತ್ತಿಗೆ ಕೇಡಾಗದಂತೆ ತಮ್ಮ ಜೀವನವನ್ನು ಆರೋಗ್ಯಕರವಾಗಿ ಧ್ಯಾನಶೀಲ, ಜ್ಞಾನಶೀಲ ಹಾಗೂ ಸೃಜನಶೀಲವಾಗಿಸಿಕೊಂಡವರು ಜಾನಪದರು. ಇದನ್ನು ಇಂದಿನ ಆಧುನಿಕರು ಅರಿತುಕೊಳ್ಳುವ ಮೂಲಕ ಉತ್ತಮ ಪ್ರಜೆಗಳಾಗಬೇಕು. ಬಡತನದಲ್ಲಿ ಬೆಳೆದ ನನ್ನ ಬದುಕು ಹಾಗೂ ಕಲಾಜ್ಞಾನವನ್ನು ವಿಶ್ವಮಟ್ಟಕ್ಕೇರಿಸಿ ಶ್ರೀಮಂತಗೊಳಿಸಿದ್ದೇ ಜಾನಪದ’ ಎಂದು ತಿಳಿಸಿದರು.

ADVERTISEMENT

ವಿಶ್ವವಿದ್ಯಾಲಯದ ಮಾನವಿಕ ಹಾಗೂ ಸಮಾಜ ವಿಜ್ಞಾನ ನಿಕಾಯದ ನಿರ್ದೇಶಕ ಜೋಶಿ ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ನಿಕಾಯದ ಡೀನ್ ಗೋಪಕುಮಾರ್ ಎ.ವಿ. ಹಾಗೂ ಸಮಾಜ ವಿಜ್ಞಾನ ಹಾಗೂ ಭಾಷಾ ವಿಭಾಗದ ಮುಖ್ಯಸ್ಥೆ ಕಾವೇರಿ ಸ್ವಾಮಿ ಭಾಗವಹಿಸಿದ್ದರು.

ಕನ್ನಡ ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ಸರ್ವೇಶ್ ಬಿ.ಎಸ್, ಕನ್ನಡ ಹಬ್ಬದ ಸಂಯೋಜಕ ಎಂ.ಭೈರಪ್ಪ, ಸಂಯೋಜಕ ಪ್ರೊ.ಎನ್.ಚಂದ್ರಶೇಖರ್, ಕನ್ನಡ ಅಧ್ಯಾಪಕರಾದ ಸೈಯದ್ ಮುಯಿನ್, ರವಿಶಂಕರ್ ಎ.ಕೆ., ಕಿರಣಕುಮಾರ್ ಎಚ್.ಜಿ, ಕನ್ನಡ ಸಾಹಿತ್ಯ ವೇದಿಕೆಯ ವಿದ್ಯಾರ್ಥಿ ಸಂಚಾಲಕರಾದ ಧೃತಿ ಹಾಗೂ ನಿತಿನ್ ಗೌಡ ಉಪಸ್ಥಿತರಿದ್ದರು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.