ADVERTISEMENT

ರಾಮಾಯಣ, ಮಹಾಭಾರತಕ್ಕೆ ಜಾನಪದವೇ ಮೂಲ

‘ಸಾಹಿತ್ಯ ಚರಿತ್ರೆಯಲ್ಲಿ ಬಿಟ್ಟುಹೋದ ದನಿಗಳನರಸುತ್ತ..’ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 15:06 IST
Last Updated 9 ನವೆಂಬರ್ 2025, 15:06 IST
<div class="paragraphs"><p>ರಾಮಾಯಣ</p></div>

ರಾಮಾಯಣ

   

ಬೆಂಗಳೂರು: ರಾಮಾಯಣ, ಮಹಾಭಾರತ ಸಹಿತ ಬಹುತೇಕ ಸಾಹಿತ್ಯದ ಮೂಲವೇ ಜಾನಪದ. ಅದೇ ಇಂದು ಲಿಪಿ ಸಾಹಿತ್ಯದಲ್ಲಿ ಬಿಟ್ಟುಹೋಗಿದೆ ಎಂದು ಜನಪದ ಸಾಹಿತಿ ಕೆ.ಆರ್‌. ಸಂಧ್ಯಾರೆಡ್ಡಿ ತಿಳಿಸಿದರು.

ಭಾನುವಾರ ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ದ ‘ಸಾಹಿತ್ಯ ಚರಿತ್ರೆಯಲ್ಲಿ ಬಿಟ್ಟುಹೋದ ದನಿಗಳನರಸುತ್ತ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ADVERTISEMENT

ಮಾನವ ಜನಾಂಗದ ಭಾವನೆಗಳ ಧ್ವನಿ ಜನಪದವಾಗಿದೆ. ಮಹಿಳೆಯರೇ ಪದಕಟ್ಟಿದ್ದು, ಹಾಡಿದವರು. ಆದರೆ, ಶಿಷ್ಟ ಸಾಹಿತ್ಯ ಆರಂಭಗೊಂಡ ಬಳಿಕ ಪುರುಷರೇ ಬರೆದರು. ಮಹಿಳಾ ಸಾಹಿತ್ಯ ಎನ್ನುವುದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಯಿತು ಎಂದರು.

‘ವಾಲ್ಮೀಕಿ ರಾಮಾಯಣಕ್ಕೂ ಅದಕ್ಕಿಂತ ಹಿಂದೆ ಇದ್ದ ಜನಪದರ ರಾಮಾಯಣಕ್ಕೂ ಬಹಳ ವ್ಯತ್ಯಾಸವಿದೆ. ವಾಲ್ಮೀಕಿ ರಾಮಾಯಣದಲ್ಲಿ ಶೂರ್ಪನಖಿ ರಾಕ್ಷಸಿಯಾದರೆ, ಜನಪದರಲ್ಲಿ ನೊಂದ, ಬೆಂದ ಒಬ್ಬಳು ಹೆಣ್ಣು. ಹಾಗೆಯೇ ಸೀತೆಗೆ ರಾಮನಿಗಿಂತ ಲಕ್ಷ್ಮಣನ ಬಗ್ಗೆಯೇ ಹೆಚ್ಚು ನಂಬಿಕೆ, ವಿಶ್ವಾಸ ಇರುವುದು ಜಾನಪದದಲ್ಲಿ ಕಾಣುತ್ತೇವೆ. ಅಶೋಕವನದಲ್ಲಿ ಶೂರ್ಪನಖಿಯ ಅಪೇಕ್ಷೆಯಂತೆ ರಾವಣನ ಚಿತ್ರ ಬಿಡಿಸಿ ಅದಕ್ಕೆ ಜೀವ ತುಂಬಿದಳು ಎಂಬ ಕಾರಣಕ್ಕೆ ಸೀತೆಯನ್ನು ಕಾಡಿಗೆ ಅಟ್ಟಲಾಯಿತು ಎಂಬುದು ಜಾನಪದದ ಕಥೆ’ ಎಂದು ವಿವರಿಸಿದರು.

‘ಮಹಾಭಾರತ ಕೂಡ ಹಾಗೆ. ಶಿಷ್ಟ ಮಹಾಭಾರತದಲ್ಲಿ ಪಾಂಡವರು ಪಗಡೆ ಜೂಜಿನಲ್ಲಿ ಸೋಲುತ್ತಾರೆ. ಆದರೆ, ಜಾನಪದ ಮಹಾಭಾರತದಲ್ಲಿ ಸ್ವತಃ ದ್ರೌಪದಿಯೇ ದುರ್ಯೋಧನನೊಂದಿಗೆ ಜೂಜಾಡಿ ಅವನ ಗಮನ ಬೇರೆಡೆಗೆ ಸೆಳೆದು ಗೆದ್ದು, ರಾಜ್ಯ ಉಳಿಸಿಕೊಳ್ಳುತ್ತಾಳೆ’ ಎಂದು ಹೇಳಿದರು.

ಜನಪದ ಸಾಹಿತಿಗಳಾದ ಎಚ್‌. ಶಶಿಕಲಾ, ಹಳೆಮನೆ ರಾಜಶೇಖರ್‌ ವಿಚಾರ ಮಂಡಿಸಿದರು. ರವಿಕುಮಾರ್ ಪಿ.ಜಿ. ಸಮನ್ವಯಕಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.