ADVERTISEMENT

ಬೆಂಗಳೂರು | ಫುಡ್‌ ಡೆಲಿವರಿ ನೆಪದಲ್ಲಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 16:05 IST
Last Updated 21 ಸೆಪ್ಟೆಂಬರ್ 2025, 16:05 IST
   

ಬೆಂಗಳೂರು: ಆಹಾರ ಪದಾರ್ಥ ತಲುಪಿಸುವ ನೆಪದಲ್ಲಿ ಅಂಗಡಿಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ಪ್ರೇಮ್‌ರಾಮ್ (35), ಲಕ್ಷ್ಮಣ್ ರಾಮ್ (32) ಎಂಬುವರನ್ನು ಬಂಧಿಸಿ, ದ್ವಿಚಕ್ರ ವಾಹನ ಹಾಗೂ ವಿವಿಧ ಕಂಪನಿಗಳ ವೈರ್ ಕಾಯಿಲ್‌ ಸೇರಿ ಸುಮಾರು ₹ 5 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಜಯನಗರ 1ನೇ ಬ್ಲಾಕ್‌ನ ಅಶೋಕ್ ಕುಮಾರ್ ಜಯನಗರ 2ನೇ ಬ್ಲಾಕ್‌ನಲ್ಲಿ ವೈರ್‌ ಕಾಯಿಲ್ ವ್ಯಾಪಾರ ನಡೆಸುತ್ತಿದ್ದಾರೆ. ಆಗಸ್ಟ್‌ 18ರಂದು ರಾತ್ರಿ ಬೀಗ ಹಾಕಿಕೊಂಡು ಹೋಗಿದ್ದರು. ಮರುದಿನ ಅಂಗಡಿಗೆ ಬಂದಾಗ ಬಾಗಿಲು ಅರ್ಧ ತೆರೆದಿರುವುದನ್ನು ನೋಡಿದಾಗ 80 ರಿಂದ 90 ವೈರ್ ಕಾಯಿಲ್‌ಗಳನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಸಿದ್ದಾಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ಸಿಸಿಟಿವಿ ಕ್ಯಾಮೆರಾ ಹಾಗೂ ಬಾತ್ಮಿದಾರರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು,  ಮಾಗಡಿ ಮುಖ್ಯ ರಸ್ತೆ ಬ್ಯಾಡರಹಳ್ಳಿಯಲ್ಲಿ ಇಬ್ಬರನ್ನು ವಾಹನ ಸಮೇತ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದನ್ನು ತಿಳಿಸಿದ್ದಾರೆ.

ಫುಡ್‌ ಡೆಲಿವರಿ ಮಾಡುವ ನೆಪದಲ್ಲಿ ಅಂಗಡಿಗಳನ್ನು ಗುರುತಿಸಿ, ರಾತ್ರಿ ವೇಳೆ ಕಟ್ಟರ್ ಮತ್ತು ಕಬ್ಬಿಣದ ರಾಡ್‌ಗಳಿಂದ ಬಾಗಿಲು ಮೀಟಿ ಕಳ್ಳತನ ಮಾಡುತ್ತಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ. ಆರೋಪಿಗಳಿಂದ 72 ವಿವಿಧ ಕಂಪನಿಯ ವೈರ್‌ ಕಾಯಿಲ್‌, ಕಟ್ಟರ್, ಕಬ್ಬಿಣದ ರಾಡ್‌ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.