ADVERTISEMENT

ಊಟದ ವಿಚಾರಕ್ಕೆ ಗಲಾಟೆ; ಕೊಲೆಯಲ್ಲಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 16:30 IST
Last Updated 18 ಡಿಸೆಂಬರ್ 2020, 16:30 IST

ಬೆಂಗಳೂರು: ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಊಟದ ವಿಚಾರಕ್ಕಾಗಿ ಸ್ನೇಹಿತರ ನಡುವೆ ನಡೆದ ಗಲಾಟೆಯು ನಸೀಮ್ (19) ಎಂಬುವರ ಕೊಲೆಯಲ್ಲಿ ಅಂತ್ಯವಾಗಿದೆ.

‘ಕಲ್ಯಾಣ ನಗರ ನಿವಾಸಿ ನಸೀಮ್ ಅವರನ್ನು ಕೊಲೆ ಮಾಡಲಾಗಿದೆ. ಸ್ನೇಹಿತರೇ ಆದ ಅಸ್ಲಾಂ (22) ಎಂಬುವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ನಸೀಮ್ ಹಾಗೂ ಅಸ್ಲಾಂ ಇಬ್ಬರೂ ಉತ್ತರ ಭಾರತದವರು. ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ನಸೀಮ್, ಬಿ. ಚನ್ನಸಂದ್ರದಲ್ಲಿರುವ ಕಬಾಬ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಸ್ಲಾಂ ಕೂಲಿ ಕೆಲಸ ಮಾಡುತ್ತಿದ್ದರು.’

ADVERTISEMENT

‘ಡಿ.16ರಂದು ಆರೋಪಿ ಅಸ್ಲಾಂ, ನಸೀಮ್ ಕೆಲಸ ಮಾಡುತ್ತಿದ್ದ ಕಬಾಬ್ ಅಂಗಡಿ ಬಳಿ ಬಂದಿದ್ದರು. ಊಟ ಏನಿದೆ ? ಎಂದು ಕೇಳಿದ್ದರು. ಅಂಗಡಿ ಮುಚ್ಚುವ ಸಮಯವಾಗಿದ್ದರಿಂದ ಊಟವಿಲ್ಲವೆಂದು ಹೇಳಿದ್ದ ನಸೀಮ್, ಫ್ರೈಡ್ ರೈಸ್ ಇರುವುದಾಗಿ ಹೇಳಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮದ್ಯದ ಅಮಲಿನಲ್ಲಿದ್ದ ಆರೋಪಿ ಅಸ್ಲಾಂ, ಫ್ರೈಡ್ ರೈಸ್ ಬೇಡವೆಂದು ಹೇಳಿ ಗಲಾಟೆ ಮಾಡಿದ್ದರು. ಕಬಾಬ್ ಬೇಕೆಂದು ಪಟ್ಟು ಹಿಡಿದು ತಟ್ಟೆ ಬಿಸಾಡಿದ್ದರು. ಅದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಅಸ್ಲಾಂ, ಗಾಜಿನ ಚೂರಿನಿಂದ ನಸೀಮ್ ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ಚುಚ್ಚಿದ್ದರು. ಗಾಯಗೊಂಡಿದ್ದ ನಸೀಮ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಶುಕ್ರವಾರ ಬೆಳಿಗ್ಗೆ ಅಸುನೀಗಿದ್ದಾರೆ’ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.