ADVERTISEMENT

‘ರಾತ್ರಿ ಕರ್ಫ್ಯೂ: ಆಹಾರ ಸೇವಾ ವಲಯಕ್ಕೆ ವಿನಾಯಿತಿ ನೀಡಿ’

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 16:17 IST
Last Updated 10 ಏಪ್ರಿಲ್ 2021, 16:17 IST

ಬೆಂಗಳೂರು: ನಗರದಲ್ಲಿ ರಾತ್ರಿ ವೇಳೆ ಜಾರಿಯಾಗಿರುವ ಕರ್ಫ್ಯೂನಿಂದ ಆಹಾರ ಸೇವಾ ವಲಯಕ್ಕೆ ವಿನಾಯಿತಿ ನೀಡಬೇಕು ಎಂದು ನ್ಯಾಷನಲ್‌ ರೆಸ್ಟೋರೆಂಟ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎನ್‌ಆರ್‌ಎಐ) ಮನವಿ ಮಾಡಿದೆ.

‘ಕೋವಿಡ್‌ ನಿಯಂತ್ರಿಸುವ ಉದ್ದೇಶದಿಂದ ರಾತ್ರಿ ಕರ್ಫ್ಯೂ ಜಾರಿಗೊಳಿಸಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಆದರೆ, ಕೋವಿಡ್‌ ಬಿಕ್ಕಟ್ಟಿನಿಂದ ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ಈಗಾಗಲೇ ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿವೆ. ರಾತ್ರಿ ಕರ್ಫ್ಯೂ ಮೂಲಕ ಸಮಯದ ಮಿತಿ ಹಾಕಿರುವುದು ಈ ವಲಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ’ ಎಂದು ಸಂಸ್ಥೆಯ ಬೆಂಗಳೂರು ಘಟಕದ ಅಧ್ಯಕ್ಷ ಮನು ಚಂದ್ರ ಪ್ರಕಟಣೆಯಲ್ಲಿ ಹೇಳಿದ್ದಾರೆ.

‘ರಾತ್ರಿ 10ಗಂಟೆಯಿಂದ ಕರ್ಫ್ಯೂ ವಿಧಿಸಲಾಗಿದೆ. ಆದರೆ, ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುವುದೇ ರಾತ್ರಿ 9ರ ನಂತರ. ಆಹಾರ ಸೇವಾ ವಲಯಕ್ಕೆ ಸೀಮಿತಗೊಳಿಸಿ, ಕರ್ಫ್ಯೂ ಅವಧಿಯಲ್ಲಿ ವಿನಾಯಿತಿ ನೀಡಬೇಕು. ರಾತ್ರಿ 10ರ ಬದಲು 11ರಿಂದ ನಿರ್ಬಂಧ ವಿಧಿಸಬೇಕು’ ಎಂದು ಒತ್ತಾಯಿಸಿ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.