ADVERTISEMENT

ಅಂಗನವಾಡಿಗಳಿಗೆ ಜನತಾ ಬಜಾರ್‌ನಿಂದ ಆಹಾರ ಪೂರೈಕೆ: ಜಾರಿಯಾಗದ ಸಂಪುಟ ನಿರ್ಧಾರ

l ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ಲಕ್ಷ್ಯ

ಎಸ್.ರವಿಪ್ರಕಾಶ್
Published 23 ಡಿಸೆಂಬರ್ 2019, 5:59 IST
Last Updated 23 ಡಿಸೆಂಬರ್ 2019, 5:59 IST

ಬೆಂಗಳೂರು: ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ (ಐಸಿಡಿಎಸ್‌) ಅಂಗನವಾಡಿ ಕೇಂದ್ರಗಳಿಗೆ ಪೂರಕ ಪೌಷ್ಟಿಕ ಆಹಾರ ಪದಾರ್ಥಗಳನ್ನು ‘ಜನತಾ ಬಜಾರ್‌’ ಮೂಲಕವೇ ಖರೀದಿಸಿ ಸರಬರಾಜು ಮಾಡಬೇಕೆಂಬ ಸಚಿವ ಸಂಪುಟದ ತೀರ್ಮಾನ ಮತ್ತು ಸರ್ಕಾರದ ಆದೇಶ ಪಾಲಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಿಂದೇಟು ಹಾಕಿದೆ.

ಇದಕ್ಕೆ ಇಲಾಖೆಯ ಕೆಲವು ಅಧಿಕಾರಿಗಳ ಕುಮ್ಮಕ್ಕು ಕಾರಣ ಎಂದು ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಳಿಯ ಮೂಲಗಳು ದೂರಿವೆ.

‘ಖಾಸಗಿಯವರ ಹಿಡಿತ ತಪ್ಪಿಸಿ, ಜನತಾ ಬಜಾರ್‌ಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲು ಅವಕಾಶ ನೀಡಿದರೆ, ತಮಗೆ ಸಿಗುವ ಕಮಿಷನ್‌ಗೆ ಕತ್ತರಿ ಬೀಳುತ್ತದೆ ಎಂಬ ಕಾರಣಕ್ಕೆ ಅಧಿಕಾರಿಗಳು ‘ಮಹಿಳಾ ಸಪ್ಲಿಮೆಂಟರಿ ಪ್ರೊಡಕ್ಷನ್ ಅಂಡ್ ಟ್ರೈನಿಂಗ್ ಸೆಂಟರ್’ (ಎಂಎಸ್‌ಪಿಟಿಸಿ) ಮುಂದಿಟ್ಟುಕೊಂಡು ಆದೇಶ ಜಾರಿ ಆಗದಂತೆ ತಡೆ ಒಡ್ಡುತ್ತಿದ್ದಾರೆ. ಸಿಡಿಪಿಒ ಕಚೇರಿ, ತಾಲ್ಲೂಕು ಖಜಾನೆ, ಉಪನಿರ್ದೇಶಕರ ಕಚೇರಿಗಳಲ್ಲಿರುವ ಕೆಲವು ಅಧಿಕಾರಿಗಳಿಗೆ ಕಮಿಷನ್‌ ಸಂದಾಯವಾಗುತ್ತದೆ’ ಎಂದು ಮೂಲಗಳು ಆರೋಪಿಸಿವೆ.

ADVERTISEMENT

ಒಟ್ಟು 137 ಎಂಎಸ್‌ಪಿಟಿಸಿಗಳು ಶಿಶು ಅಭಿವೃದ್ಧಿ ಯೋಜನೆಯ ಬೇಡಿಕೆಗೆ ಅನುಗುಣವಾಗಿ ಪೂರಕ ಪೌಷ್ಟಿಕ ಆಹಾರ ಪದಾರ್ಥಗಳನ್ನು ಖಾಸಗಿಯವರಿಂದ ಖರೀದಿಸಿ ಅಂಗನವಾಡಿಗಳಿಗೆ ಪೂರೈಕೆ ಮಾಡುತ್ತಿವೆ. ಅಕ್ಕಿ ಮತ್ತು ಗೋಧಿಯನ್ನು ಭಾರತೀಯ ಆಹಾರ ನಿಗಮದಿಂದ, ಎಣ್ಣೆಯನ್ನು ಕರ್ನಾಟಕ ಆಯಿಲ್ ಫೆಡರೇಷನ್‌ನಿಂದ ಹಾಗೂ ಉಳಿದ 15 ಪದಾರ್ಥಗಳನ್ನು ಸ್ಥಳೀಯವಾಗಿ ಖರೀದಿಸಿ ಪ್ಯಾಕಿಂಗ್‌ ಮಾಡಿ ಪೂರೈಕೆ ಮಾಡುತ್ತಿವೆ.

ಈ ರೀತಿ ಸರಬರಾಜು ಮಾಡುವ ಆಹಾರ ಪದಾರ್ಥಗಳ ಬೆಲೆಯು ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸ ಆಗಿರುವುದು ಪತ್ತೆಯಾಗಿತ್ತು. ಇದನ್ನು ತಪ್ಪಿಸಿ, ಎಲ್ಲ ಜಿಲ್ಲೆಗಳಲ್ಲೂ ಆಹಾರ ಪದಾರ್ಥಗಳನ್ನು ಏಕರೂಪದ ದರದಲ್ಲೇ ಖರೀದಿಸಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ (2016) ತೀರ್ಮಾನಿಸಿತ್ತು. ಇದಕ್ಕೆ ಸರ್ಕಾರಿ ಸ್ವಾಮ್ಯದ ಜನತಾ ಬಜಾರ್‌ ಸೂಕ್ತ. ಎಂಎಸ್‌ಪಿಟಿಸಿಗಳು
ಅವುಗಳನ್ನು ಸಂಸ್ಕರಿಸಿ ಸರಬರಾಜು ಮಾಡಬೇಕು ಎಂದು ಸಚಿವ ಸಂಪುಟವು ನಿರ್ಧಾರ ಕೈಗೊಂಡಿತ್ತು. ಬಳಿಕ ಈ ಬಗ್ಗೆ ಆದೇಶವನ್ನೂ ಹೊರಡಿಸಲಾಗಿತ್ತು.

ಈ ಯೋಜನೆಯಡಿ ಆಹಾರ ಪದಾರ್ಥಗಳ ಖರೀದಿಗೆ ಕೇಂದ್ರ ಸರ್ಕಾರ ಅನುದಾನ ನೀಡುತ್ತದೆ. ಅನುದಾನದ ಮೊತ್ತ ವಾರ್ಷಿಕ ಸುಮಾರು ₹800 ಕೋಟಿಯಿಂದ ₹1,000 ಕೋಟಿ. ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಮೂಲಕ ಖರೀದಿಸಲು ಅವಕಾಶ ನೀಡಿದರೆ, ಕಮಿಷನ್‌ ತಗ್ಗುತ್ತದೆ ಎಂಬ ಆತಂಕದಿಂದ ಅಧಿಕಾರಿಗಳು ಆದೇಶ ಜಾರಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಮೂಲಗಳು ಆರೋಪಿಸಿವೆ.

ಸಚಿವ ಸಂಪುಟದ ತೀರ್ಮಾನ ಮತ್ತು ಸರ್ಕಾರದ ಆದೇಶವನ್ನು
ಕಾರ್ಯಗತಗೊಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಇಚ್ಛಾಶಕ್ತಿ ತೋರಿಸುತ್ತಿಲ್ಲ. ಈ ಮಧ್ಯೆ
ಎಂಎಸ್‌ಪಿಟಿಸಿಗಳು ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿವೆ. ಇದಕ್ಕೆ ತಡೆಯಾಜ್ಞೆ ತಂದು ಆದೇಶ ಜಾರಿಗೆ ಇಲಾಖೆ ಅಧಿಕಾರಿಗಳಿಗೆ ಆಸಕ್ತಿ ಇಲ್ಲ. ಹೀಗಾಗಿಎಂಎಸ್‌ಪಿಟಿಸಿಗಳನ್ನು ಮುಂದಿಟ್ಟುಕೊಂಡು ಪ್ರಕರಣ ಇತ್ಯರ್ಥ ಆಗದಂತೆ ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ವಿವರಿಸಿವೆ.

ಪ್ರತಿ ವರ್ಷ ಆಹಾರ ಪದಾರ್ಥಗಳ ಖರೀದಿ ಪ್ರಕ್ರಿಯೆಯ ಲೆಕ್ಕಪರಿಶೋಧನೆ ನಡೆಸಬೇಕು. ಆದರೆ, ಈವರೆಗೂ ಆ ಕೆಲಸ ಆಗಿಲ್ಲ. ಜನತಾ ಬಜಾರ್‌ ಸಹಕಾರ ಇಲಾಖೆಯ ಅಂಗಸಂಸ್ಥೆ. ಇದಕ್ಕೆ
ಆಹಾರ ಪದಾರ್ಥಗಳ ಸರಬರಾಜು ಜವಾಬ್ದಾರಿ ನೀಡಿದರೆ, ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ನ್ಯಾಯೋಚಿತ ಬೆಲೆಯಲ್ಲಿ ಸರಬರಾಜು ಮಾಡಬಹುದು. ಸರ್ಕಾರಕ್ಕೆ ಪ್ರತಿ ತಿಂಗಳು ₹ 6 ಕೋಟಿಯಿಂದ ₹8 ಕೋಟಿಯಷ್ಟು ಉಳಿತಾಯ ಆಗಲಿದೆ ಎನ್ನುತ್ತವೆ ಜನತಾ ಬಜಾರ್‌ ಮೂಲಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.