ADVERTISEMENT

ರಾಜರಾಜೇಶ್ವರ ನಗರ, ದಕ್ಷಿಣ ವಲಯದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 15:40 IST
Last Updated 11 ಜುಲೈ 2025, 15:40 IST
ರಾಜರಾಜೇಶ್ವರಿ ನಗರದ ಬಿಇಎಂಎಲ್‌ ಕಾಂಪ್ಲೆಕ್ಸ್‌ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅಂಗಡಿಗಳ ಚಾವಣಿಯನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು
ರಾಜರಾಜೇಶ್ವರಿ ನಗರದ ಬಿಇಎಂಎಲ್‌ ಕಾಂಪ್ಲೆಕ್ಸ್‌ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅಂಗಡಿಗಳ ಚಾವಣಿಯನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು   

ಪ್ರಜಾವಾಣಿ ವಾರ್ತೆ

ಬೆಂಗಳೂರು: ನಗರದಾದ್ಯಂತ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಆರಂಭಿಸಿದ್ದು, ರಾಜರಾಜೇಶ್ವರಿ ನಗರ ಹಾಗೂ ದಕ್ಷಿಣ ವಲಯದ ಎಂಟು ಮುಖ್ಯ ರಸ್ತೆಗಳಲ್ಲಿ ಒತ್ತುವರಿಯನ್ನು ಶುಕ್ರವಾರ ತೆರವುಗೊಳಿಸಿತು.

ದಕ್ಷಿಣ ವಲಯದ ಬಸವನಗುಡಿ ವಿಭಾಗದ ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೀದಿ, ‌ಬಿಟಿಎಂ ಲೇಔಟ್ ವಿಭಾಗದ ಲಸ್ಕರ್ ಹೊಸೂರು ರಸ್ತೆ 20ನೇ ಮುಖ್ಯರಸ್ತೆಯ ಫೋರಂ ಮಾಲ್‌ನಿಂದ 80 ಅಡಿ ರಸ್ತೆಯ ಒಳಾಂಗಣ ಕ್ರೀಡಾಂಗಣದವರೆಗೆ, ಚಿಕ್ಕಪೇಟೆ ವಿಭಾಗದ ಕನಕನಪಾಳ್ಯ ಜಯನಗರ 8ನೇ ಮುಖ್ಯರಸ್ತೆಯಿಂದ ಪಟ್ಟಾಲಮ್ಮ ಮುಖ್ಯರಸ್ತೆಯವರೆಗೆ, ಜಯನಗರ ವಿಭಾಗದ 4ನೇ 'ಟಿ' ಬ್ಲಾಕ್‌ನಿಂದ 32ನೇ 'ಇ' ಅಡ್ಡರಸ್ತೆಯಿಂದ ಮಾರೇನಹಳ್ಳಿ ರಸ್ತೆ, ಪದ್ಮನಾಭನಗರ ವಿಭಾಗದ ಕದಿರೇನಹಳ್ಳಿ ಕೆಳಸೇತುವೆಯಿಂದ ಕತ್ತರಿಗುಪ್ಪೆ ಸಿಗ್ನಲ್‌ವರೆಗೆ ಹಾಗೂ ವಿಜಯನಗರ ವಿಭಾಗದ ಕಾರ್ಡ್‌ ರಸ್ತೆಯ ಅತ್ತಿಗುಪ್ಪೆ ಪೆಟ್ರೋಲ್ ಬಂಕ್‌ನಿಂದ ಸ್ಕೈಲೇನ್ ಅರ್ಪಾಟ್‌ಮೆಂಟ್‌ವರೆಗೆ ಪಾದಚಾರಿ ಮಾರ್ಗದಲ್ಲಿದ್ದ ಅಕ್ರಮ ಶೆಡ್‌, ತಳ್ಳುವ ಗಾಡಿ, ಅಂಗಡಿ ಸಾಮಗ್ರಿಗಳು, ಶೀಟ್‌ಗಳನ್ನು ತೆರವುಗೊಳಿಸಲಾಯಿತು.

ADVERTISEMENT

ನ್ಯಾಷನಲ್ ಕಾಲೇಜು ಮೇಲ್ಸೇತುವೆ, ಕದಿರೇನಹಳ್ಳಿ, ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಬೀದಿ, ಮಾರೇನಹಳ್ಳಿ ಮುಖ್ಯರಸ್ತೆ, ಬಿನ್ನಿ ಕಾರ್ಮಿಕರ ಬಡಾವಣೆ, ಯಾರಬ್ ನಗರ ಪ್ರದೇಶಗಳ ರಸ್ತೆ ಇಕ್ಕೆಲಗಳಲ್ಲಿ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ಹೂಳು, ಕಸ ಹಾಗೂ ಘನತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಬಿಇಎಂಎಲ್ ಕಾಂಪ್ಲೆಕ್ಸ್‌ನಿಂದ (ಮಂದಾರ ರೆಸ್ಟೋರೆಂಟ್) ಬಿಎಂಟಿಸಿ ಬಸ್ ಡಿಪೋವರೆಗಿನ ಮುಖ್ಯರಸ್ತೆ, ಕೆಂಗೇರಿ ವಿಭಾಗದ ಮುದ್ದಿನಪಾಳ್ಯ ಮುಖ್ಯರಸ್ತೆಯಿಂದ (ರಿಲಯನ್ಸ್ ಪ್ರೆಶ್ ಕಾಂಪ್ಲೆಕ್ಸ್) ಮುದ್ದಿನಪಾಳ್ಯ ವೃತ್ತದವರೆಗಿನ ಮುಖ್ಯರಸ್ತೆಯ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳ ತಾತ್ಕಾಲಿಕ ತಗಡಿನ ಚಾವಣಿ, ತಾತ್ಕಾಲಿಕ ಶೆಡ್‌, ಜಾಹೀರಾತು ಫಲಕಗಳು, ತಡೆಗೋಡೆಗಳು, ಮೆಟ್ಟಿಲುಗಳು, ಬೀದಿ ಬದಿ ವ್ಯಾಪಾರಿಗಳ ತಳ್ಳುವ ಗಾಡಿ ಹಾಗೂ ಕಟ್ಟಡ ನಿರ್ಮಾಣದ ಸಾಮಗ್ರಿಗಳನ್ನು ತೆರವುಗೊಳಿಸಲಾಯಿತು.

ಜುಲೈನ ಮೂರನೇ ಶನಿವಾರದಂದು ಕೆಂಗೇರಿ ವಿಭಾಗದ ಮುದ್ದಿನಪಾಳ್ಯ ವೃತ್ತದಿಂದ ದ್ವಾರಕಾವಾಸ ರಸ್ತೆ ರತ್ನನಗರದವರೆಗೆ ಹಾಗೂ  ರಾಜರಾಜೇಶ್ವರಿನಗರ ವಿಭಾಗದ ಜಯಣ್ಣ ವೃತ್ತದಿಂದ ಕೆಂಪೇಗೌಡ ಡಬಲ್ ರಸ್ತೆ ಹಲಗೆವಡೇರಹಳ್ಳಿ ಮೂಲಕ ಕೆಂಚೇನಹಳ್ಳಿ ಮುಖ್ಯರಸ್ತೆವರೆಗೆ ಪಾದಚಾರಿ ಮಾರ್ಗ ತೆರವುಗೊಳಿಸಲಾಗುತ್ತದೆ ಎಂದು ವಲಯ ಆಯುಕ್ತ ಬಿ.ಸಿ. ಸತೀಶ್‌ ತಿಳಿಸಿದರು.

ಚಿಕ್ಕಪೇಟೆಯಲ್ಲಿ ಪಾದಚಾರಿ ಮಾರ್ಗದ ಒತ್ತುವರಿಯನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದರು

ತಿಂಗಳಲ್ಲಿ ನಾಲ್ಕು ದಿನ ತೆರವು

ಪ್ರತಿ ತಿಂಗಳ ಒಂದನೇ ಮತ್ತು ಮೂರನೇ ಶನಿವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶುಕ್ರವಾರದಂದು ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಎಂಟೂ ವಲಯಗಳಲ್ಲಿ ನಡೆಯಲಿದೆ. ಯಾವ ಪಾದಚಾರಿ ಮಾರ್ಗದಲ್ಲಿ ತೆರವುಗೊಳಿಸಲಾಗುತ್ತದೆ ಎಂಬುದನ್ನು ಮುಂಚಿತವಾಗಿಯೇ ಪ್ರಕಟಿಸಲಾಗುತ್ತದೆ. ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿದವರು ಸ್ವಯಂಪ್ರೇರಿತರಾಗಿ ತೆರವುಗೊಳಿಸಬಹುದು ಎಂದು ಬಿಬಿಎಂಪಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.