ADVERTISEMENT

ಪಾದಚಾರಿ ಮಾರ್ಗ: ಏಕರೂಪಕ್ಕೆ BBMP ಮುಖ್ಯ ಆಯುಕ್ತ ಮಹೇಶ್ವರ ರಾವ್ ಸೂಚನೆ

​ಪ್ರಜಾವಾಣಿ ವಾರ್ತೆ
Published 9 ಮೇ 2025, 16:29 IST
Last Updated 9 ಮೇ 2025, 16:29 IST
ಲಾಲ್‌ಬಾಗ್‌ ಬಳಿ ಪಾದಚಾರಿ ಮಾರ್ಗವನ್ನು ವಿಸ್ತರಣೆ ಮಾಡಲು ಮುಖ್ಯ ಆಯುಕ್ತ ಮಹೇಶ್ವರ ರಾವ್‌ ಸೂಚಿಸಿದರು
ಲಾಲ್‌ಬಾಗ್‌ ಬಳಿ ಪಾದಚಾರಿ ಮಾರ್ಗವನ್ನು ವಿಸ್ತರಣೆ ಮಾಡಲು ಮುಖ್ಯ ಆಯುಕ್ತ ಮಹೇಶ್ವರ ರಾವ್‌ ಸೂಚಿಸಿದರು   

ಬೆಂಗಳೂರು: ನಾಗರಿಕರಿಗೆ ನಡೆಯಲು ಅನುಕೂಲಕರವಾಗುವಂತೆ ಏಕರೂಪದಲ್ಲಿ ಪಾದಚಾರಿ ಮಾರ್ಗದ ಅಗಲವನ್ನು ಕಾಯ್ದುಕೊಳ್ಳುವಂತೆ ಮುಖ್ಯ ಆಯುಕ್ತ ಮಹೇಶ್ವರ ರಾವ್‌ ಅವರು ಸೂಚಿಸಿದರು.

ಲಾಲ್‌ಬಾಗ್ ಪೂರ್ವದ್ವಾರದಿಂದ ಡಬಲ್ ರೋಡ್, ಸಿದ್ದಾಪರ ವೃತ್ತ, ಅಶೋಕ್ ಪಿಲ್ಲರ್ ವೃತ್ತ, ಜಯನಗರ ಇಂದಿರಾ ಕ್ಯಾಂಟೀನ್‌ವರೆಗೆ 1.9 ಕಿ.ಮೀ ದೂರವನ್ನು ಶುಕ್ರವಾರ ಮುಂಜಾನೆ 6.20ರಿಂದ 7.45ರವರೆಗೆ ನಡಿಗೆ ಮೂಲಕ ಕ್ರಮಿಸಿದ ಮುಖ್ಯ ಆಯುಕ್ತರು, ಪಾದಚಾರಿ ಮಾರ್ಗದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಆದೇಶಿಸಿದರು.

ಲಾಲ್‌ಬಾಗ್ ಪೂರ್ವ ದ್ವಾರದಿಂದ ಪರಿಶೀಲನೆ ಪ್ರಾರಂಭಿಸಿ, ಹಾಪ್ ಕಾಮ್ಸ್ ಬಳಿ ಒತ್ತುವರಿಯನ್ನು ತೆರವುಗೊಳಿಸಲು ಸೂಚಿಸಿದರು. ಬಸ್ ತಂಗುದಾಣ ಬಳಿ ಸ್ವಚ್ಛತೆ ಕಾಪಾಡಲು ತಿಳಿಸಿದರು. ಪಾದಚಾರ ಮಾರ್ಗದಲ್ಲಿರುವ ಮೂರು ವಿದ್ಯುತ್‌ ಕಂಬಗಳನ್ನು ತೆರವುಗೊಳಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಪಾದಚಾರಿ ಮಾರ್ಗದಲ್ಲಿ ವಿದ್ಯುತ್‌ ಪರಿವರ್ತಕ ಅಳವಡಿಸಿರುವುದರಿಂದ ನಾಗರಿಕರು ಓಡಾಡಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಳವಡಿಸುವಂತೆ ಬೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು ಎಂದು ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದರು.

ಸಿದ್ದಾಪುರ ವೃತ್ತದ ಕೊಳೆಗೇರಿಯಲ್ಲಿರುವ ಶೌಚಾಲಯ ನಿರ್ವಹಣೆಯಾಗಬೇಕು, ಬಸ್ ತಂಗುದಾಣಗಳ ಬಳಿ ಕಸದ ಬುಟ್ಟಿಗಳನ್ನು ಇರಿಸಬೇಕು. ಪಾದಚಾರಿ ಮಾರ್ಗದಲ್ಲಿ ಸಸಿ ನೆಟ್ಟು ಪೋಷಿಸಬೇಕು ಎಂದು ಸೂಚನೆ ನೀಡಿದರು.

ಅಶೋಕ ಪಿಲ್ಲರ್ ಜಂಕ್ಷನ್ ಬಳಿ ಪಾದಚಾರಿ ಮಾರ್ಗದಲ್ಲಿ ಅನಾಥ ಆಟೊ ಇದ್ದು, ಅದನ್ನು ತೆರವುಗೊಳಿಸಲು ಸೂಚನೆ ನೀಡಿದರು. ಆ ಬಳಿಕ ಶಿವಳ್ಳಿ ಹೋಟೆಲ್ ಬಳಿ ಕಟ್ಟಡವೊಂದಕ್ಕೆ ವಿದ್ಯುತ್‌ ಪರಿವರ್ತಕದ ಸಂಪರ್ಕ ಕಲ್ಪಿಸಿದ್ದು, ಅದರಿಂದ ಪಾದಚಾರಿ ಮಾರ್ಗವು ಸಂಪೂರ್ಣ ಹಾಳಾಗಿದೆ. ಈ ಸಂಬಂಧ ಕಟ್ಟಡ ಮಾಲೀಕರಿಗೆ ನೋಟೀಸ್ ನೀಡಿ, ದುರಸ್ತಿ ಕಾರ್ಯಕ್ಕೆ ತಗಲುವ ವೆಚ್ಚ ವಸೂಲಿ ಮಾಡುವುದರ ಜೊತೆಗೆ ದಂಡ ವಿಧಿಸಬೇಕು ಎಂದು ತಾಕೀತು ಮಾಡಿದರು.

ಲಾಲ್ ಬಾಗ್ ಸುತ್ತಲೂ ಸ್ವಚ್ಛತೆ ಕಾಪಾಡಲು ತೋಟಗಾರಿಕಾ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅನಂತರ ತಾತ್ಕಾಲಿಕವಾಗಿ ಗೃಹ ರಕ್ಷಕ ಸಿಬ್ಬಂದಿ ನಿಯೋಜಿಸಿ ಎಲ್ಲಿಯೂ ಸ್ವಚ್ಛತೆ ಹಾಳಾಗದಂತೆ ನೋಡಿಕೊಳ್ಳಬೇಕು ಎಂದರು.

ಮನೆ-ಮನೆಯಿಂದ ಆಟೋ ಟಿಪ್ಪರ್‌ಗಳ ಮೂಲಕ ಸಂಗ್ರಹಿಸುವ ತ್ಯಾಜ್ಯವನ್ನು ಕಾಂಪ್ಯಾಕ್ಟರ್‌ಗಳಿಗೆ ರವಾನಿಸುವ ಟ್ರಾನ್ಸಫರ್ ಪಾಯಿಂಟ್‌ಗಳು ಬಹುತೇಕ ರಸ್ತೆ ಬದಿಯೇ ಇವೆ. ಇದರಿಂದ ರಸ್ತೆಗಳು ಹಾಳಾಗಲಿದ್ದು, ಸ್ವಚ್ಛತೆ ಇರುವುದಿಲ್ಲ. ಹೀಗಾಗಿ ಬೇರೆ ಸ್ಥಳಗಳನ್ನು ಗುರುತಿಸಬೇಕು ಎಂದು ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.