ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಅಡತಡೆಯಿಲ್ಲದ ಪಾದಚಾರಿ ಮಾರ್ಗದ ವ್ಯವಸ್ಥೆಗೆ ಆದ್ಯತೆ ನೀಡಿ, ಪಾದಚಾರಿ ಮಾರ್ಗ ಒತ್ತುವರಿಯನ್ನು ನಿರಂತರವಾಗಿ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುವುದು ಎಂದು ವಲಯ ಆಯುಕ್ತ ಬಿ.ಸಿ. ಸತೀಶ್ ತಿಳಿಸಿದರು.
ಕೆಂಗೇರಿ ಉಪ ವಿಭಾಗ ವ್ಯಾಪ್ತಿಯ ಮಾಗಡಿ ಮುಖ್ಯರಸ್ತೆಯಿಂದ ಈಸ್ಟ್ ವೆಸ್ಟ್ ಕಾಲೇಜು, ಒಂದನೇ ಹಂತ, ಬಿಇಎಲ್ ಲೇಔಟ್‌ವರೆಗೆ ಹಾಗೂ ರಾಜರಾಜೇಶ್ವರಿನಗರ ವಿಭಾಗದ ಮೈಸೂರು ಮುಖ್ಯ ರಸ್ತೆ, ಗೋಪಾಲನ್ ಮಾಲ್ ಆರ್ಚ್‌ನಿಂದ ರಾಜರಾಜೇಶ್ವರಿನಗರದ 18ನೇ ಅಡ್ಡರಸ್ತೆ , ಐಡಿಯಲ್ ಹೋಮ್ಸ್‌ವರೆಗೆ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬುಧವಾರ ನಡೆಸಲಾಯಿತು ಎಂದು ಮಾಹಿತಿ ನೀಡಿದರು.
ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡಿದ್ದ ಅಂಗಡಿಗಳು, ತಾತ್ಕಾಲಿಕ ಚಾವಣಿಗಳು, ಮೆಟ್ಟಿಲುಗಳು, ತಾತ್ಕಾಲಿಕ ಶೆಡ್‌ಗಳು, ಕಟ್ಟಡ ನಿರ್ಮಾಣದ ಸಾಮಗ್ರಿ, ತಡೆಗೋಡೆಗಳು, ನಂದಿನಿ ಬೂತ್, ಜಾಹೀರಾತು ಫಲಕಗಳು, ಮಣ್ಣು ಮತ್ತು ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
ಪ್ಲಾಸ್ಟಿಕ್ ತಪಾಸಣೆ: ಪಾದಚಾರಿ ಮಾರ್ಗ ತೆರವು ಕಾರ್ಯಾಚರಣೆಯೊಂದಿಗೆ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ, ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿರುವ ಬಗ್ಗೆ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಬಳಸುತ್ತಿದ್ದ 37 ಅಂಗಡಿಗಳಿಂದ ₹64,300 ದಂಡ ವಸೂಲಿ ಮಾಡಲಾಯಿತು.
ಆಗಸ್ಟ್ 14ರಂದು ವಲಯ ವ್ಯಾಪ್ತಿಯ ಕೆಂಗೇರಿ ವಿಭಾಗದ ಕೃಷ್ಣಪ್ರಿಯ ಕನ್ವೆನ್ಷನ್ ಹಾಲ್‌ನಿಂದ ಮೈಸೂರು ರಸ್ತೆಯ ಕಿಯಾ ಶೋರೂಂವರೆಗೆ, ರಾಜರಾಜೇಶ್ವರಿನಗರ ವಿಭಾಗದ ಬಾಂಬೆ ಡೈಯಿಂಗ್ ರಸ್ತೆ, ಮತ್ತಿಕೆರೆ ಮುಖ್ಯರಸ್ತೆಯಿಂದ ಯಶವಂತಪುರ ಹೂವಿನ ಮಾರುಕಟ್ಟೆವರೆಗೆ (ಎಡಭಾಗ) ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಸತೀಶ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.