ಬೆಂಗಳೂರು: ‘ಖಾಸಗಿ ಸಂಸ್ಥೆಗಳು, ಅಪಾರ್ಟ್‌ಮೆಂಟ್, ಕಾಂಪ್ಲೆಕ್ಸ್ ಹಾಗೂ ಇತರ ಖಾಸಗಿ ಸಂಸ್ಥೆಗಳು ತಮ್ಮ ಆವರಣದ ಮುಂಭಾಗದಲ್ಲಿರುವ ಪಾದಚಾರಿ ಮಾರ್ಗಗಳನ್ನು ಸ್ವಯಂ ಪ್ರೇರಿತವಾಗಿ ಅಭಿವೃದ್ಧಿಪಡಿಸಿ, ನಿರ್ವಹಣೆ ಮಾಡಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚಿಸಿದರು.
ಮಹದೇವಪುರ ವಲಯದಲ್ಲಿ ಶನಿವಾರ ಪರಿಶೀಲನೆ ಸಂದರ್ಭದಲ್ಲಿ ಮಾತನಾಡಿದ ಅವರು, ಖಾಸಗಿಯವರು ಪಾದಚಾರಿ ಮಾರ್ಗದ ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡಲು ಅನುಕೂಲವಾಗಲು ವಿಭಾಗೀಯ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದರು.
‘ರಸ್ತೆ ಬದಿಯ ಎಲ್ಲಾ ಮನೆಗಳ ಮುಂಭಾಗದ ಗೇಟುಗಳು ಒಳಭಾಗಕ್ಕೆ ತೆರೆಯುವಂತಿರಬೇಕು. ಪಾದಚಾರಿ ಮಾರ್ಗದ ಮೇಲೆ ಹೊರಗೆ ತೆರೆಯುವಂತಹ ಗೇಟುಗಳನ್ನು ಅಳವಡಿಸಿದವರಿಗೆ ದಂಡ ವಿಧಿಸಬೇಕು. ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರುವ ಉದ್ದೇಶದಿಂದ ಎಲ್ಲಾ ಆವರಣದ ಗೇಟುಗಳ ಸಮಗ್ರ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು.
‘ಮಹದೇವಪುರ ವಲಯ ವ್ಯಾಪ್ತಿಯ ಸೀತಾರಾಮ್ ಪಾಳ್ಯ ಮೆಟ್ರೊ ನಿಲ್ದಾಣದಿಂದ ಬಿಇಎಂಎಲ್ ಲೇಔಟ್ ಮುಖ್ಯರಸ್ತೆವರೆಗೆ ಪರಿಶೀಲಿಸಿದ ಮಹೇಶ್ವರ್ ರಾವ್, ಪಾದಚಾರಿ ಮಾರ್ಗದ ಒತ್ತುವರಿ ತೆರವು, ರಾಜಕಾಲುವೆಯ ಹತ್ತಿರದ ಕಟ್ಟಡಗಳ ತೆರವಿಗೆ ಕ್ರಮ ವಹಿಸಲು ಸೂಚಿಸಿದರು. ವಲಯ ಆಯುಕ್ತರು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಿರಂತರ ಪರಿಶೀಲಿಸಬೇಕು’ ಎಂದು ತಿಳಿಸಿದರು.
ಬ್ರಿಗೇಡ್ ಟೆಕ್ ಗಾರ್ಡನ್ ಸಂಸ್ಥೆಯವರು ಪಾದಚಾರಿ ಮಾರ್ಗದಲ್ಲಿ ಅಡ್ಡಲಾಗಿ ಅಳವಡಿಸಿರುವ ಕರ್ಬ್‌ಗಳನ್ನು ಕೂಡಲೇ ತೆರವುಗೊಳಿಸಬೇಕು, ಐಟಿಪಿಎಲ್ ಮುಖ್ಯ ರಸ್ತೆಯಲ್ಲಿರುವ ಶಿವಶಕ್ತಿ ಬಾರ್‌ನವರು ಮದ್ಯದ ಬಾಟಲ್, ಪ್ಲಾಸ್ಟಿಕ್ ಬಾಟಲ್‌ಗಳನ್ನು ರಸ್ತೆಗೆ ಎಸದಿದ್ದು, ಅದನ್ನು ತೆರವುಗೊಳಿಸಿ, ಬಾರ್‌ನವರಿಗೆ ದಂಡ ವಿಧಿಸಲು ಸೂಚಿಸಿದರು.
ಗ್ರಾಫೈಟ್ ಇಂಡಿಯಾ ಮುಖ್ಯರಸ್ತೆಯಲ್ಲಿನ ರಾಯಲ್ ಬಿಲ್ಡಿಂಗ್ ಹೌಸ್‌ನವರು ತ್ಯಾಜ್ಯವನ್ನು ಪಾದಚಾರಿ ಮಾರ್ಗದಲ್ಲಿ ಹಾಕಿದ್ದು, ಅವರಿಗೆ ದಂಡ ವಿಧಿಸಬೇಕು. ವಾಹನಗಳನ್ನು ನಿಲುಗಡೆ ಮಾಡುವುದನ್ನು ತಡೆಯಬೇಕು ಎಂದರು.
ಐಟಿಪಿಎಲ್ ಮುಖ್ಯರಸ್ತೆಯಲ್ಲಿರುವ ಅಕ್ಮೆ ಎನ್‌ಕೋರ್ ಅಪಾರ್ಟ್‌ಮೆಂಟ್‌ನವರು ತ್ಯಾಜ್ಯ ನೀರನ್ನು ಚರಂಡಿಗೆ ಬಿಡುತ್ತಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.