ADVERTISEMENT

ಕೋವಿಡ್: 100 ಪರೀಕ್ಷೆಗಳಲ್ಲಿ 12 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 16:56 IST
Last Updated 5 ಸೆಪ್ಟೆಂಬರ್ 2020, 16:56 IST
   

ಬೆಂಗಳೂರು: ರಾಜ್ಯದಲ್ಲಿ ನಡೆಸಲಾಗುತ್ತಿರುವ ಪ್ರತಿ 100 ಕೋವಿಡ್ ಪರೀಕ್ಷೆಗಳಲ್ಲಿ 12 ಮಂದಿಗೆ ಕೋವಿಡ್‌ ಇರುವುದು ದೃಢಪಡುತ್ತಿದೆ. ಜೂನ್‌ನಲ್ಲಿ ಈ ಸಂಖ್ಯೆ 100ಕ್ಕೆ 8ರಷ್ಟಿತ್ತು.

ಆರಂಭಿಕ ಹಂತದಲ್ಲೇ ಸೋಂಕಿತರನ್ನು ಪತ್ತೆ ಮಾಡಿ, ಮರಣ ಪ್ರಮಾಣ ಕಡಿಮೆ ಮಾಡಲು ಪರೀಕ್ಷೆ ಸಂಖ್ಯೆ ಹೆಚ್ಚಿಸಲಾಗಿದೆ. ಒಂದು ತಿಂಗಳಿಂದ ಪ್ರತಿನಿತ್ಯ ಸರಾಸರಿ 50 ಸಾವಿರ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈವರೆಗೆ ನಡೆಸಲಾದ ಒಟ್ಟು ಪರೀಕ್ಷೆಗಳ ಸಂಖ್ಯೆ 32 ಲಕ್ಷ ದಾಟಿದೆ. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಪ್ರತಿ ನೂರು ಪರೀಕ್ಷೆಗಳಿಗೆ ಪತ್ತೆಯಾಗುವ ಸೋಂಕಿತರ ಸಂಖ್ಯೆ ಕೂಡ ಏರಿಕೆ ಕಂಡಿದೆ.

ರಾಜ್ಯದಲ್ಲಿ ವರದಿಯಾಗಿರುವ ಕೋವಿಡ್‌ ಪ್ರಕರಣಗಳಲ್ಲಿ ಶೇ 92ರಷ್ಟು ಮಂದಿಗೆ ಸೋಂಕಿನ ಲಕ್ಷಣಗಳೇ ಗೋಚರಿಸಿಲ್ಲ.ಕೋವಿಡ್ ಪೀಡಿತರ ಸಂಪರ್ಕಿತರನ್ನು ‍ಪತ್ತೆ ಮಾಡಿ, ಪರೀಕ್ಷೆಗೆ ಒಳಪಡಿಸಿದಾಗ ಸೋಂಕಿತರಾಗಿರುವುದು ದೃಢಪಡುತ್ತಿದೆ.ಪುದುಚೇರಿ ಹಾಗೂ ಮಹಾರಾಷ್ಟ್ರದಲ್ಲಿಪ್ರತಿ ನೂರು ಪರೀಕ್ಷೆಯಲ್ಲಿ 19 ಮಂದಿಗೆ ಸೋಂಕು ತಗುಲಿರುವುದು ದೃಢಪಡುತ್ತಿದೆ. ಒಡಿಶಾದಲ್ಲಿ 18 ಮಂದಿ ಸೋಂಕಿತರಾಗುತ್ತಿರುವುದು ಖಚಿತಪಟ್ಟಿದೆ. ಈ ಪಟ್ಟಿಯಲ್ಲಿ ಕರ್ನಾಟಕ ಆರನೇ ಸ್ಥಾನದಲ್ಲಿದೆ. ಮಿಜೋರಾಂ‌ನಲ್ಲಿ ಅತ್ಯಂತ ಕಡಿಮೆ ಮಂದಿ (1) ಸೋಂಕಿತರಾಗಿರುವುದು ದೃಢಪಡುತ್ತಿದೆ.

ADVERTISEMENT

ಕಳೆದ 10 ದಿನಗಳಲ್ಲಿ ರಾಜ್ಯದಲ್ಲಿ ನಡೆಸಲಾದ ಕೋವಿಡ್ ಪರೀಕ್ಷೆಗಳಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ‍ಪ್ರತಿ 10 ಲಕ್ಷ ಜನರಿಗೆ 26,310 ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಧಾರವಾಡ (11,850), ಚಿಕ್ಕಬಳ್ಳಾಪುರ (11,398) ಜಿಲ್ಲೆಗಳಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಬೀದರ್ (4,477) ಹಾಗೂ ಹಾವೇರಿಯಲ್ಲಿ (4,484) ಅತ್ಯಂತ ಕಡಿಮೆ ಪರೀಕ್ಷೆಗಳು ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.