ADVERTISEMENT

ಅತಿಥಿ ಸೋಗಿನಲ್ಲಿ ವಿದೇಶಿ ಗಣ್ಯರ ಬ್ಯಾಗ್‌ ಕಳ್ಳತನ: ಆಂಧ್ರಪ್ರದೇಶದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 14:20 IST
Last Updated 16 ಜುಲೈ 2025, 14:20 IST
ಶ್ರೀನಿವಾಸಲು
ಶ್ರೀನಿವಾಸಲು   

ಬೆಂಗಳೂರು: ಸ್ಟಾರ್‌ ಹೋಟೆಲ್‌ಗಳಲ್ಲಿ ನಡೆಯುವ ಅಂತರರಾಷ್ಟ್ರೀಯ ವಿಚಾರಸಂಕಿರಣ ಹಾಗೂ ಕಾರ್ಯಾಗಾರಗಳಿಗೆ ಅತಿಥಿಯ ಸೋಗಿನಲ್ಲಿ ಹೋಗಿ ವಿದೇಶಿ ಗಣ್ಯರ ಬ್ಯಾಗ್‌ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಹಬ್ಸಿಗುಡದ ರವೀಂದ್ರ ನಗರದ ನಿವಾಸಿ ಚಿಂತಕಿಂದಿ ಶ್ರೀನಿವಾಸಲು (57) ಬಂಧಿತ ಆರೋಪಿ.

ಆರೋಪಿಯಿಂದ 270 ಯುಎಸ್ ಡಾಲರ್ಸ್, 2,900 ತೈವಾನ್ ಡಾಲರ್ಸ್, 200 ಆಸ್ಟ್ರೇಲಿಯಾ ಡಾಲರ್ಸ್ ಮತ್ತು 10 ಸಾವಿರ ಲಾವೋಸ್‌ನ ‘ಲಾಹೋ ಕರೆನ್ಸಿ ಕಿಪ್’ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಜೂನ್ 23ರಂದು ಶಾಂಗ್ರಿ–ಲಾ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಕಂಪನಿಯೊಂದರ ವಾರ್ಷಿಕ ಸಭೆಯಲ್ಲಿ ಅತಿಥಿಯ ಸೋಗಿನಲ್ಲಿ ಭಾಗಿಯಾಗಿದ್ದ ಆರೋಪಿ, ಅತಿಥಿಯೊಬ್ಬರ ಬ್ಯಾಗ್‌ನಲ್ಲಿದ್ದ ವಿದೇಶಿ ಕರೆನ್ಸಿ ಕದ್ದು ಪರಾರಿಯಾಗಿದ್ದ.
ಈ ಕುರಿತು ಹೋಟೆಲ್​ನ ವ್ಯವಸ್ಥಾಪಕರು ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಅಂತರರಾಷ್ಟ್ರೀಯ ಅತಿಥಿಗಳು ಭಾಗಿಯಾಗುವ ವಿಚಾರಸಂಕಿರಣ, ಕಾರ್ಯಾಗಾರಗಳು ನಡೆಯುವ ಸ್ಥಳಗಳ ಕುರಿತು ಪತ್ರಿಕೆಗಳು ಹಾಗೂ ಕಂಪನಿಯ ವೆಬ್‌ಸೈಟ್‌ನಲ್ಲಿ ತಿಳಿದುಕೊಳ್ಳುತ್ತಿದ್ದ ಆರೋಪಿ, ತಾನೂ ಸಹ ಆಹ್ವಾನಿತ ಅತಿಥಿಯ ಸೋಗಿನಲ್ಲಿ ವೇಷಭೂಷಣ ಮಾಡಿಕೊಂಡು ಹೋಗುತ್ತಿದ್ದ ಎಂದು ಪೊಲೀಸರು ಹೇಳಿದರು.

ಅತಿಥಿಗಳು ತಮ್ಮ ಬ್ಯಾಗ್‌ಅನ್ನು ಇಟ್ಟು ಬೇರೆಡೆ ತೆರಳಿದಾಗ ಅವುಗಳನ್ನು ಕಳ್ಳತನ ಮಾಡುತ್ತಿದ್ದ. ಅಧಿಕ ಮೌಲ್ಯ ಸಿಗಬಹುದೆಂದು ವಿದೇಶಿ ಕರೆನ್ಸಿಯನ್ನೇ ಹೆಚ್ಚಾಗಿ ಕಳ್ಳತನ ಮಾಡುತ್ತಿದ್ದ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಹಾಕೆ ಮಚ್ಚಿಂದ್ರ ತಿಳಿಸಿದರು.

ಲಾಡ್ಜ್‌ನಲ್ಲಿ ವಾಸ್ತವ್ಯ: ‘ಆರೋಪಿ ಶ್ರೀನಿವಾಸಲು ಹೈದಾರಾಬಾದ್‍ನಲ್ಲಿ ಸ್ಟೋನ್ಸ್ ವ್ಯವಹಾರ ಮಾಡುತ್ತಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆತ ಕಳವು ಮಾಡುವ ಉದ್ದೇಶಕ್ಕಾಗಿಯೇ ಬೆಂಗಳೂರಿಗೆ ಬಂದು ಲಾಡ್ಜ್‌ನಲ್ಲಿ ವಾಸ್ತವ್ಯ ಮಾಡುತ್ತಿದ್ದ. ಬಳಿಕ ಹಣ ಕದ್ದು ರಾತ್ರೋರಾತ್ರಿ ಲಾಡ್ಜ್‌ನಲ್ಲಿ ರೂಂ ಖಾಲಿ ಮಾಡಿ ಆಂಧ್ರಪ್ರದೇಶಕ್ಕೆ ಪರಾರಿಯಾಗುತ್ತಿದ್ದ’ ಎಂದು ತಿಳಿಸಿದರು.

‘ಶ್ರೀನಿವಾಸಲು, ಇತ್ತೀಚೆಗೆ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲೂ ಗಣ್ಯರ ಬಳಿಯಿದ್ದ ಕರೆನ್ಸಿ ಎಗರಿಸಿದ್ದ. ಈ ಸಂಬಂಧ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತನ ಹಿನ್ನೆಲೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಅತಿಥಿಯ ಸೋಗಿನಲ್ಲಿ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಆರೋಪಿ ಶ್ರೀನಿವಾಸಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.