ADVERTISEMENT

‘ಸುರಕ್ಷತಾ ದ್ವೀಪ’ದಿಂದ ವಿದೇಶಿ ಪ್ರಜೆ ಬ್ಯಾಗ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2023, 0:30 IST
Last Updated 28 ಜೂನ್ 2023, 0:30 IST
ಬೆಂಗಳೂರಿನಲ್ಲಿ ಸ್ಥಾಪಿಸಿರುವ ‘ಸುರಕ್ಷತಾ ದ್ವೀಪ’.
ಬೆಂಗಳೂರಿನಲ್ಲಿ ಸ್ಥಾಪಿಸಿರುವ ‘ಸುರಕ್ಷತಾ ದ್ವೀಪ’.   

ಬೆಂಗಳೂರು: ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಸುರಕ್ಷತೆಗಾಗಿ ನಗರದ 30 ಸ್ಥಳಗಳಲ್ಲಿ ಸ್ಥಾಪಿಸಿರುವ ‘ಸುರಕ್ಷತಾ ದ್ವೀಪ’ (ಸೇಫ್ಟಿ ಐಲ್ಯಾಂಡ್‌) ವ್ಯವಸ್ಥೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಇದೇ ವ್ಯವಸ್ಥೆ ಬಳಸಿಕೊಂಡಿರುವ ವಿದೇಶಿ ಪ್ರಜೆಯೊಬ್ಬರು, ತಾವು ಕಳೆದುಕೊಂಡಿದ್ದ ಬ್ಯಾಗ್‌ ವಾಪಸು ಪಡೆದುಕೊಂಡಿದ್ದಾರೆ.

‘ಮಾಲ್ಡೀವ್ಸ್ ಛಾಯಾಗ್ರಾಹಕ ಹಸನ್ ಸಿಮ್ಹಾ, ಸ್ಯಾಫ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ಗಾಗಿ ತಮ್ಮ ದೇಶದ ತಂಡದ ಜೊತೆ ನಗರಕ್ಕೆ ಬಂದಿದ್ದಾರೆ. ಸೋಮವಾರ ಸಂಜೆ ಹಸನ್ ಹಾಗೂ ಇಬ್ಬರು ಸ್ನೇಹಿತರು, ಆಟೊದಲ್ಲಿ ಅಶೋಕನಗರ ಠಾಣೆ ವ್ಯಾಪ್ತಿಯ ಗರುಡಾ ಮಾಲ್‌ಗೆ ಹೋಗಿದ್ದರು. ಮಾಲ್‌ ಬಳಿ ಇಳಿದುಕೊಂಡಿದ್ದ ಹಸನ್, ಆಟೊದಲ್ಲಿದ್ದ ಬ್ಯಾಗ್ ತೆಗೆದುಕೊಳ್ಳಲು ಮರೆತಿದ್ದರು. ಆಟೊ ಸ್ಥಳದಿಂದ ಹೊರಟು ಹೋಗಿತ್ತು’ ಎಂದು ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದರು.

‘ಕ್ಯಾಮೆರಾ, ಅದರ ಉಪಕರಣಗಳು, ಲ್ಯಾಪ್‌ಟಾಪ್‌, ಪಾಸ್‌ಪೋರ್ಟ್ ಹಾಗೂ ಇತರೆ ವಸ್ತುಗಳು ಬ್ಯಾಗ್‌ನಲ್ಲಿದ್ದವು. ಆಟೊ ಪತ್ತೆ ಮಾಡಲು ಹಸನ್ ಹಾಗೂ ಸ್ನೇಹಿತರು ಪ್ರಯತ್ನಿಸಿದ್ದರು. ಆದರೆ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸ್ಥಳೀಯ ಜನರ ಸಲಹೆಯಂತೆ ಸುರಕ್ಷತಾ ದ್ವೀಪದ ಬಳಿ ಹೋಗಿದ್ದ ಹಸನ್, ಘಟನೆ ಬಗ್ಗೆ ನಿಯಂತ್ರಣ ಕೊಠಡಿ ಸಿಬ್ಬಂದಿ ಮಾಹಿತಿ ನೀಡಿದ್ದರು’ ಎಂದು ತಿಳಿಸಿದರು.

ADVERTISEMENT

‘ಕೆಲ ನಿಮಿಷಗಳಲ್ಲಿ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಹೋಗಿ ಮಾಹಿತಿ ಪಡೆದುಕೊಂಡಿದ್ದರು. ಇದಾದ ಕೆಲ ಗಂಟೆಗಳಲ್ಲಿ ಆಟೊವನ್ನು ಪತ್ತೆ ಮಾಡಿರುವ ಸಿಬ್ಬಂದಿ, ಹಸನ್‌ ಅವರಿಗೆ ಬ್ಯಾಗ್ ಹಿಂದಿರುಗಿಸಿದ್ದಾರೆ’ ಎಂದು ಹೇಳಿದರು.

‘ವಿದೇಶಿ ಪ್ರಜೆ ರೀತಿಯಲ್ಲಿ ಹಲವರು ಸುರಕ್ಷತಾ ದೀಪದ ಪ್ರಯೋಜನ ಪಡೆಯುತ್ತಿದ್ದಾರೆ. ಈ ವ್ಯವಸ್ಥೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.