ADVERTISEMENT

ಅರಣ್ಯ ಭೂಮಿ ಪತ್ತೆಗೆ ಎಸ್‌ಐಟಿ: ಸುಪ್ರೀಂ ಕೋರ್ಟ್ ತೀರ್ಪು

ತನಿಖೆಗೆ ತಂಡ ರಚಿಸಿದ ಅರಣ್ಯ ಇಲಾಖೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2025, 0:30 IST
Last Updated 17 ಸೆಪ್ಟೆಂಬರ್ 2025, 0:30 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ಬೆಂಗಳೂರು: ಕಂದಾಯ ಇಲಾಖೆಯ ಸ್ವಾಧೀನದಲ್ಲಿದ್ದ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಗಳಿಗಾಗಿ ಮಂಜೂರು ಮಾಡಲಾಗಿದೆಯೇ ಎಂಬುದನ್ನು ಪತ್ತೆ ಹಚ್ಚಿ, ಅಂತಹ ಭೂಮಿಯನ್ನು ಮರುವಶಕ್ಕೆ ಪಡೆಯಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ವಿಶೇಷ ತನಿಖಾ ತಂಡಗಳನ್ನು (ಎಸ್ಐಟಿ) ರಚಿಸಲಾಗಿದೆ. 

ಸುಪ್ರೀಂಕೋರ್ಟ್‌ ನೀಡಿದ ನಿರ್ದೇಶನದ ಬೆನ್ನಲ್ಲೇ ಅರಣ್ಯ ಇಲಾಖೆಯು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಎಸ್‌ಐಟಿ ರಚಿಸಿದೆ. ನಾಲ್ಕು ತಿಂಗಳಲ್ಲಿ ಈ ಕುರಿತ ವರದಿ ನೀಡಬೇಕೆಂದು ಜಿಲ್ಲಾ ಎಸ್ಐಟಿಗೆ ನಿರ್ದೇಶಿಸಲಾಗಿದೆ. 

‘ಕಂದಾಯ ಇಲಾಖೆ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಇಲ್ಲವೇ ಸಂಸ್ಥೆಗಳಿಗೆ ಹಂಚಿಕೆ ಮಾಡಿದ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಬಳಕೆ ಮಾಡಲಾಗಿದೆಯೇ ಎನ್ನುವುದನ್ನು ವಿಶೇಷ ತನಿಖಾ ತಂಡಗಳು ಪತ್ತೆ ಮಾಡಬೇಕು. ‌ಹೀಗೆ ಹಂಚಿಕೆ ಮಾಡಿದ ಭೂಮಿಯನ್ನು ರಾಜ್ಯ ಸರ್ಕಾರವು ವಾಪಸ್‌ ಪಡೆದು ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕು. ಹಸ್ತಾಂತರಿಸಿದ ಭೂಮಿಯು ಸಾರ್ವಜನಿಕ ಹಿತಾಸಕ್ತಿಯ ವ್ಯಾಪ್ತಿಯೊಳಗೆ ಬಾರದಿದ್ದರೆ ಸ್ವಾಧೀನದಲ್ಲಿರುವ ವ್ಯಕ್ತಿ ಇಲ್ಲವೇ ಸಂಸ್ಥೆಯಿಂದ ನಿಗದಿತ ದರ ಸಂಗ್ರಹಿಸಿ ಅಂತಹ ಮೊತ್ತವನ್ನು ಅರಣ್ಯೀಕರಣ ಚಟುವಟಿಕೆಗಳಿಗೆ ಬಳಕೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು.  ಈ ಕಾರಣದಿಂದಾಗಿ ಎಸ್‌ಐಟಿಗಳನ್ನು ರಚಿಸಲಾಗಿದೆ’ ಎಂದು ಆದೇಶ ಉಲ್ಲೇಖಿಸಿದೆ.

ADVERTISEMENT

ಟಿ.ಎನ್.ಗೋದವರ್ಮನ್‌ ತಿರುಮುಲ್‌ ಪಾಡ್‌ ವರ್ಸಸ್‌ ಯೂನಿಯನ್‌ ಆಫ್‌ ಇಂಡಿಯಾ ಮತ್ತಿತರರ ನಡುವಿನ ರಿಟ್‌ ಪ್ರಕರಣ (ಸಂಖ್ಯೆ 202/1995) ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಮೇ 15ರಂದು ತೀರ್ಪು ನೀಡಿತ್ತು. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಕೊಂಡ್ವಾ ಬುದ್ರುಕ್‌ ಎಂಬಲ್ಲಿ ಕೃಷಿ ಉದ್ದೇಶಕ್ಕೆ ಅರಣ್ಯ ಭೂಮಿ ಹಂಚಿಕೆ ಮಾಡಿ ನಂತರ ಮಾರಾಟ ಮಾಡಲು ಅನುಮತಿ ನೀಡಿದ್ದ ವಿಚಾರ ನ್ಯಾಯಾಲಯ ಮೆಟ್ಟಿಲೇರಿತ್ತು. ಕಂದಾಯ ಇಲಾಖೆ ಹಂಚಿಕೆ ಮಾಡಿದ ಅರಣ್ಯಭೂಮಿಯನ್ನು ಮಾರಾಟ ಮಾಡಲು ಅವಕಾಶ ನೀಡಿದ್ದರೆ ಅಂತಹ ಭೂಮಿಯನ್ನು ಮೂರು ತಿಂಗಳ ಒಳಗೆ ಹಿಂದಕ್ಕೆ ಪಡೆಯಬೇಕು ಎಂದು ಆದೇಶಿಸಿತ್ತು. ಅಲ್ಲದೇ ಇದೇ ಆದೇಶವನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯಿಸಬೇಕು. ಇದಕ್ಕಾಗಿ ವಿಶೇಷ ತನಿಖಾ ತಂಡಗಳನ್ನು ರಚಿಸಬೇಕು ಎಂದು ಸೂಚಿಸಿತ್ತು. 

‘ಕರ್ನಾಟಕದಲ್ಲಿ ಈ ರೀತಿ 50,000 ರಿಂದ 60,000 ಎಕರೆಯಷ್ಟು ಅರಣ್ಯ ಭೂಮಿಯನ್ನು ಕಂದಾಯ ಇಲಾಖೆ ಹಂಚಿಕೆ ಮಾಡಿರುವ ಮಾಹಿತಿಯಿದ್ದು, ತನಿಖೆಯ ನಂತರ ನಿಖರ ವಿವರ ಸಿಗಲಿದೆ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಮಿತಿಯಲ್ಲಿ ಯಾರು?

ರಾಜ್ಯ ಮಟ್ಟದಲ್ಲಿ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುತ್ತಾರೆ. ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಅರಣ್ಯ ಪಡೆಗಳ ಮುಖ್ಯಸ್ಥ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮೌಲ್ಯಮಾಪನ, ಕಾರ್ಯಯೋಜನೆ, ಸಂಶೋಧನೆ) ಸದಸ್ಯರಾಗಿರಲಿದ್ದಾರೆ. ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಕಾರ್ಯಯೋಜನೆ) ಸದಸ್ಯ ಕಾರ್ಯದರ್ಶಿಯಾಗಿರುವರು.

ಜಿಲ್ಲಾ ಮಟ್ಟದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿ, ಸದಸ್ಯ ಕಾರ್ಯದರ್ಶಿಯಾಗಿ ಪ್ರಾದೇಶಿಕ ಹಾಗೂ ವನ್ಯಜೀವಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸದಸ್ಯರಾಗಿ ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರು ಕಾರ್ಯನಿರ್ವಹಿಸಲಿದ್ದಾರೆ.

ಜಿಲ್ಲಾ ತಂಡದ ಕಾರ್ಯ ಹೇಗೆ?

ಜಿಲ್ಲಾ ಮಟ್ಟದ ವಿಶೇಷ ತನಿಖಾ ತಂಡವು ಆಯಾ ಜಿಲ್ಲೆಗಳಲ್ಲಿ ಕಂದಾಯ ಇಲಾಖೆಯು ಹಂಚಿಕೆ ಮಾಡಿರುವ ಅರಣ್ಯ ಭೂಮಿಯನ್ನು ಅರಣ್ಯವಲ್ಲದೇ ಯಾವ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಕುರಿತು ದಾಖಲೆಗಳನ್ನು ಪರಿಶೀಲಿಸಿ, ತನಿಖೆ ನಡೆಸಬೇಕು.

ತಾಲ್ಲೂಕು, ಹೋಬಳಿ, ಗ್ರಾಮದ ಹೆಸರು, ಸರ್ವೆ ನಂಬರ್‌ಗಳೊಂದಿಗೆ ಭೂಮಿಯನ್ನು ಖಾಸಗಿ ವ್ಯಕ್ತಿ ಇಲ್ಲವೇ ಸಂಸ್ಥೆಗೆ ಯಾವ ಉದ್ದೇಶಕ್ಕೆ ಹಂಚಿಕೆ ಮಾಡಲಾಗಿದೆ. ಯಾವ ಉದ್ದೇಶಕ್ಕೆ ಈಗ ಬಳಕೆ ಮಾಡಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚಬೇಕು. ಭೂಮಿ ಹಂಚಿಕೆ ವೇಳೆ ನೀಡಿರುವ ಆದೇಶದ ಪ್ರತಿಗಳನ್ನು ಸಂಬಂಧಪಟ್ಟವರಿಂದ ಪಡೆದುಕೊಳ್ಳಬೇಕು.

ಪ್ರತಿ ಜಿಲ್ಲೆಯಲ್ಲಿ ಹಂಚಿಕೆಯಾಗಿರುವ ಅರಣ್ಯ ಭೂಮಿ, ಉದ್ಧೇಶದ ಮಾಹಿತಿಯನ್ನು ಸರ್ವೇ ನಂಬರ್‌ ಸಹಿತ ನಿಖರವಾಗಿ ದಾಖಲಿಸಿ ನಿಗದಿತ ನಮೂನೆಯಲ್ಲಿ ರಾಜ್ಯ ವಿಶೇಷ ತನಿಖಾ ತಂಡಕ್ಕೆ ಸಲ್ಲಿಸಬೇಕು.

ರಾಜ್ಯ ವಿಶೇಷ ತನಿಖಾ ತಂಡ ರೂಪಿಸಿದ ಮಾರ್ಗಸೂಚಿ/ ವಿವರಣೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು.

ಸಾರ್ವಜನಿಕರ ಹಿತದೃಷ್ಟಿಯನ್ನು ಗಮನದಲ್ಲಿದ್ದುಕೊಂಡು ವ್ಯಕ್ತಿ ಇಲ್ಲವೇ ಸಂಸ್ಥೆಗಳ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯ ನಿಖರ ಮಾಹಿತಿ ಸಂಗ್ರಹಿಸಬೇಕು.

ಇಂತಹ ಭೂಮಿ ವಿಚಾರವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದರೆ ಅವುಗಳ ಮಾಹಿತಿಯನ್ನೂ ಒದಗಿಸಬೇಕು.

ಜಿಲ್ಲಾ ಮಟ್ಟದಲ್ಲಿ ಸಂಗ್ರಹಿಸುವ ಸಮಗ್ರ ಮಾಹಿತಿಯನ್ನು ನಾಲ್ಕು ತಿಂಗಳ ಒಳಗೆ ರಾಜ್ಯ ವಿಶೇಷ ತಂಡಕ್ಕೆ ಸಲ್ಲಿಸಬೇಕು.

ರಾಜ್ಯ ತಂಡದ ಕೆಲಸವೇನು?

ರಾಜ್ಯ ಸಮಿತಿಯು ನಿಯಮಿತವಾಗಿ ಸಭೆಗಳನ್ನು ನಡೆಸಿ ಜಿಲ್ಲಾ ಮಟ್ಟದ ವಿಶೇಷ ತನಿಖಾ ತಂಡಗಳ ಪ್ರಗತಿಯನ್ನು ಪರಾಮರ್ಶಿಸಬೇಕು. ತನಿಖೆಗೆ ಪೂರಕವಾಗಿ ಮಾರ್ಗಸೂಚಿಗಳು ಇಲ್ಲವೇ ಸ್ಪಷ್ಟನೆಗಳನ್ನು ಒದಗಿಸಬೇಕು.

ಜಿಲ್ಲಾ ತನಿಖಾ ತಂಡಗಳು ನೀಡುವ ವರದಿಗಳನ್ನು ಕ್ರೋಡೀಕರಿಸಿ ಸರ್ಕಾರಕ್ಕೆ ವಿಸ್ತೃತ ವರದಿಯ ಸಲ್ಲಿಸಬೇಕು.

ಅರಣ್ಯ ಭೂಮಿಯನ್ನು ವ್ಯಕ್ತಿಗಳು ಇಲ್ಲವೇ ಸಂಸ್ಥೆಗಳಿಂದ ವಶ ಪಡಿಸಿಕೊಂಡು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸುಗಳನ್ನು ಮಾಡಬೇಕು. ಸಾರ್ವಜನಿಕ ಹಿತಾಸಕ್ತಿಯ ಸಮಸ್ಯೆ ಇಲ್ಲದ ಸನ್ನಿವೇಶದಲ್ಲಿ ಅರಣ್ಯ ಭೂಮಿ ಸ್ವಾಧೀನದಲ್ಲಿರುವ ವ್ಯಕ್ತಿ ಇಲ್ಲವೇ ಸಂಸ್ಥೆಯಿಂದ ದರ ನಿಗದಿಪಡಿಸಿ ಅವರಿಂದ ವಸೂಲಿ ಮಾಡಲು ಕಾರ್ಯವಿಧಾನ ಗಳನ್ನು ರೂಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.