
ಬೆಂಗಳೂರು: ಅರಣ್ಯ ಕ್ಷೇತ್ರದಲ್ಲಿ ರೈತರು, ಸಂಶೋಧಕರು ಮತ್ತು ಸ್ಥಳೀಯ ಸಮುದಾಯಗಳಿಗೆ ತರಬೇತಿ ನೀಡಲು ಹಾಗೂ ಅರಣ್ಯ ಆಧಾರಿತ ಜೀವನೋಪಾಯಗಳನ್ನು ವಿಸ್ತರಿಸಲು ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮೊದಲ ‘ವನ ವಿಜ್ಞಾನ ಕೇಂದ್ರ’ವನ್ನು ಆರಂಭಿಸಲಾಗಿದೆ.
ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಯು (ಐಸಿಎಫ್‌ಆರ್‌ಇ) ‘ವನ ವಿಜ್ಞಾನ ಕೇಂದ್ರ’ದ ಎಲ್ಲ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಲಿದೆ. ಐಸಿಎಫ್‌ಆರ್‌ಇನ ಅಂಗ ಸಂಸ್ಥೆಗಳು, ಕೆಲವು ರಾಜ್ಯಗಳ ಅರಣ್ಯ ಇಲಾಖೆಗಳಲ್ಲಿ ಮಾತ್ರ ವನ ವಿಜ್ಞಾನ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಈಗ ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮೊದಲ ಕೇಂದ್ರ ಆರಂಭವಾಗಿದೆ.
ಮೊದಲ ಹಂತದಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳ ಕುರಿತು 2025ರ ಮಾರ್ಚ್‌ನಲ್ಲಿ ಬೆಂಗಳೂರಿನಲ್ಲಿರುವ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ (ಐಡಬ್ಲ್ಯುಎಸ್‌ಟಿ) ಜೊತೆಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಒಪ್ಪಂದ ಮಾಡಿಕೊಂಡಿದೆ. ಈ ಪ್ರಕಾರ, ಕೇಂದ್ರದಲ್ಲಿ ಕೈಗೊಳ್ಳುವ ಚಟುವಟಿಕೆಗಳಿಗೆ ಪ್ರತಿವರ್ಷ ಐಡಬ್ಲ್ಯುಎಸ್‌ಟಿ ಧನಸಹಾಯ ಒದಗಿಸಬೇಕು. ಐಸಿಎಫ್‌ಆರ್‌ಇ ತನ್ನಲ್ಲಿ ಲಭ್ಯವಿರುವ ಮರಗಳ ತಳಿಗಳು, ಅರಣ್ಯ ತಂತ್ರಜ್ಞಾನಗಳನ್ನು ಒದಗಿಸಬೇಕು. ಕೇಂದ್ರದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ವಿಶ್ವವಿದ್ಯಾಲಯದ ಕೆವಿಕೆಗಳ ಮೂಲಕ ರೈತರಿಗೆ ತಲುಪಿಸಬೇಕು.
‘ಅರಣ್ಯ ಪ್ರದೇಶವನ್ನು ಹೆಚ್ಚಿಸುವುದು, ಸ್ಥಳೀಯ ಸಸ್ಯ ಸಂಪತ್ತನ್ನು ರಕ್ಷಣೆ ಮಾಡುವುದು. ಇದಕ್ಕೆ ಸಂಬಂಧಿಸಿದಂತೆ ಸಂಶೋಧನೆ ಹಾಗೂ ವಿಸ್ತರಣಾ ಚಟುವಟಿಕೆಗಳನ್ನು ನಡೆಸುವುದು. ಕಾಡು ಸಂಪನ್ಮೂಲಗಳ ಸುಸ್ಥಿರ ಉಪಯೋಗ, ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಅರಣ್ಯಗಳಲ್ಲಿ ಸಿಗುವ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸುವುದು ಈ ಕೇಂದ್ರದ ಉದ್ಧೇಶವಾಗಿದೆ’ ಎಂದು ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ನೈಸರ್ಗಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಉದ್ಯಮಗಳನ್ನು ಸ್ಥಾಪಿಸುವಂತೆ ರೈತರನ್ನು ಉತ್ತೇಜಿಸಲಾಗುತ್ತದೆ. ಅರಣ್ಯೀಕರಣ ಯೋಜನೆಗಳು ಹಾಗೂ ಪರಿಸರ ಸಮತೋಲನ ಕಾಯುವ ಯೋಜನೆಗಳನ್ನು ರೂಪಿಸಲಾಗುತ್ತದೆ. ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಾರ್ವಜನಿಕರಿಗೆ ಈ ಕೇಂದ್ರದಲ್ಲಿ ಪ್ರಾಯೋಗಿಕವಾಗಿ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದು ವಿವರಿಸಿದರು.
‘ಅರಣ್ಯ ಜಾಗೃತಿ ಶಿಬಿರಗಳು, ಮರು–ಅರಣ್ಯೀಕರಣ, ಅರಣ್ಯ ಉತ್ಪನ್ನಗಳಿಗೆ ಮೌಲ್ಯವರ್ಧನೆ, ಕಾನೂನು ಜಾಗೃತಿ, ತೋಟಗಾರಿಕೆ ಹಾಗೂ ಅರಣ್ಯ ಕೃಷಿಗೆಸಂಬಂಧಿಸಿದಂತೆ ತರಬೇತಿ ನೀಡಲಾಗುತ್ತದೆ. ಸುಧಾರಿತ ಅರಣ್ಯ ತಳಿಯ ಮರಗಳ ಬೆಳೆ ಅಥವಾ ತಳಿಗಳ ಮಾದರಿಗಳನ್ನು ನರ್ಸರಿಗಳಲ್ಲಿ ಬೆಳೆದು ರೈತರಿಗೆ ವಿತರಿಸುವುದು. ಅರಣ್ಯ ನಿರ್ವಹಣಾ ವಿಧಾನಗಳನ್ನು ತಿಳಿಸಲಾಗುತ್ತದೆ’ ಎಂದು ಕೇಂದ್ರದ ನೋಡಲ್ ಅಧಿಕಾರಿ ಎಚ್.ಬಿ. ರಘು ತಿಳಿಸಿದರು.
‘ಪ್ರಾತ್ಯಕ್ಷಿಕೆ ಕೇಂದ್ರ ಪ್ರಾರಂಭ’
‘ವನ ವಿಜ್ಞಾನ ಕೇಂದ್ರಕ್ಕೆ ಬೇಕಾಗುವ ಸಂಶೋಧನೆ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ ಹಾಗೂ ತಾಕುಗಳನ್ನು ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಲಾಗಿದೆ. ಮಾದರಿ ಅರಣ್ಯ ಸಸ್ಯ ಕ್ಷೇತ್ರಕ್ಕೆ ಬೇಕಾಗುವ ಮರಗಳನ್ನು ಬೆಳೆಸಲಾಗುತ್ತಿದೆ’ ಎಂದು ಎಸ್.ವಿ. ಸುರೇಶ ತಿಳಿಸಿದರು. ‘ಕೃಷಿ ಅರಣ್ಯಕ್ಕೆ ಸೂಕ್ತವಾದ ಉತ್ಕೃಷ್ಟ ಸಸಿಗಳ ಉತ್ಪಾದನೆ ಹೆಚ್ಚಿಸಲಾಗುತ್ತದೆ. ಅರಣ್ಯ ಸಂರಕ್ಷಣೆ ಕುರಿತು ಜಾಗೃತಿ ಕಾರ್ಯಕ್ರಮಗಳು ಕುರಿತು ತರಬೇತಿಗಳನ್ನು ನೀಡಲಾಗುತ್ತದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.