ADVERTISEMENT

₹40 ಕೋಟಿ ಮೌಲ್ಯದ ಆಸ್ತಿ ಕೊಳ್ಳೆಗೆ ನಕಲಿ ದಾಖಲೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 21:45 IST
Last Updated 22 ಡಿಸೆಂಬರ್ 2022, 21:45 IST
ಎಂ.ಎಸ್. ಪ್ರಸಾದ್ ಹಾಗೂ ಸಹೋದರ ಎಂ.ಎಸ್. ದಿವ್ಯ
ಎಂ.ಎಸ್. ಪ್ರಸಾದ್ ಹಾಗೂ ಸಹೋದರ ಎಂ.ಎಸ್. ದಿವ್ಯ   

ಬೆಂಗಳೂರು: ಪಟ್ಟಣಗೆರೆ ಗ್ರಾಮದಲ್ಲಿರುವ ಸುಮಾರು ₹40 ಕೋಟಿ ಮೌಲ್ಯದ 3 ಎಕರೆ ಆಸ್ತಿ ತಮ್ಮದಾಗಿಸಿಕೊಳ್ಳಲು ನಕಲಿ ದಾಖಲೆ ಸೃಷ್ಟಿಸಿದ್ದ ಆರೋಪದಡಿ ಬಿಬಿಎಂ‍ಪಿ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಸೇರಿದಂತೆ ಐವರನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸರ್ವೇ ನಂಬರ್ 68ರಲ್ಲಿರುವ (ಹಳೇ ನಂ. 10) 3 ಎಕರೆ ಆಸ್ತಿ ಪರಭಾರೆ ಬಗ್ಗೆ ರೈತ ಎಸ್. ರಾಮಕೃಷ್ಣಯ್ಯ ದೂರು ನೀಡಿದ್ದರು. ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿತ್ತು. ತನಿಖೆ
ಕೈಗೊಂಡು ಐವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಜರಾಜೇಶ್ವರಿನಗರ ಬಿಬಿಎಂಪಿ ಕಚೇರಿಯ ಎಸ್‌ಡಿಎ ನವೀನ್, ಕೃತ್ಯಕ್ಕೆ ಸಹಕರಿಸಿದ್ದ ಜನಾರ್ದನ್, ನಾರಾಯಣಸ್ವಾಮಿ ಹಾಗೂ ಆಸ್ತಿಯನ್ನು ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿದ್ದ ಟ್ರಿಂಕೋ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್‌ನ ಎಂ.ಎಸ್. ಪ್ರಸಾದ್, ಎಂ.ಎಸ್. ದಿವ್ಯ ಬಂಧಿತರು. ಐವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಾಲ್ವರನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ನಕಲಿ ದಾಖಲೆ ಸೃಷ್ಟಿಸಿದ್ದ ಆಸ್ತಿಯನ್ನು ಕಡಿಮೆ ಬೆಲೆಗೆ ಖರೀದಿಸಿದ್ದ ಟ್ರಿಂಕೋ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್‌ನ ಎಂ.ಎಸ್. ಪ್ರಸಾದ್ ಹಾಗೂ ಸಹೋದರ ಎಂ.ಎಸ್. ದಿವ್ಯ, ನಿವೇಶನ ಅಭಿವೃದ್ಧಿಪಡಿಸಲು ಮುಂದಾಗಿದ್ದರು’ ಎಂದರು.

3 ಎಕರೆ ಆಸ್ತಿ ಲಪಟಾಯಿಸಲು ನಕಲಿ ಮರಣಪತ್ರ ಸೃಷ್ಟಿ

‘ದೂರುದಾರ ರಾಮಕೃಷ್ಣಯ್ಯ ಅವರಿಗೆ ಪಿತ್ರಾರ್ಜಿತವಾಗಿ ಬಂದಿದ್ದ 3 ಎಕರೆ ಆಸ್ತಿಯನ್ನು ವ್ಯವಸಾಯೇತರ ವಾಸದ ಉದ್ದೇಶಕ್ಕಾಗಿ ಬದಲಾಯಿಸಿ ಜಿಲ್ಲಾಧಿಕಾರಿಯವರು 1992ರಲ್ಲಿ ಆದೇಶ ನೀಡಿದ್ದರು. ಮೇ 5ರಂದು ಆಸ್ತಿಗೆ ಅಕ್ರಮವಾಗಿ ಪ್ರವೇಶಿಸಿದ್ದ ಆರೋಪಿಗಳು, ತಮ್ಮ ಜಾಗವೆಂದು ಗಲಾಟೆ ಮಾಡಿದ್ದರು. ಇದನ್ನು ಪ್ರಶ್ನಿಸಿದ್ದ ರಾಮಕೃಷ್ಣಯ್ಯ, ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು’ ಎಂದು ಪೊಲೀಸರು ಹೇಳಿದರು. ‘ವಿಚಾರಣೆ ನಡೆಯುವಾಗಲೇ ದೂರುದಾರರ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಿದ್ದರು. ನಕಲಿ ಮರಣ ಪ್ರಮಾಣಪತ್ರ, ನಕಲಿ ಭೂ ಪತಿವರ್ತನಾ ಆದೇಶ ಪ್ರತಿಗಳು ಪತ್ತೆಯಾಗಿದ್ದವು. ಈ ಸಂಗತಿಯನ್ನು ನ್ಯಾಯಾಲಯದ ಗಮನಕ್ಕೂ ತಂದಿದ್ದ ದೂರುದಾರ, ತಹಶೀಲ್ದಾರ್ ಅವರಿಗೂ ಮಾಹಿತಿ ನೀಡಿದ್ದರು. ಅವರ ಸಲಹೆಯಂತೆ ಠಾಣೆಗೂ ದೂರು ನೀಡಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.