ADVERTISEMENT

ಕೊಲೆಗೆ ಸಂಚು ರೂಪಿಸಿದ್ದ ನಾಲ್ಕು ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಮೇ 2021, 20:48 IST
Last Updated 30 ಮೇ 2021, 20:48 IST
ಬಂಧಿತರು ಹಾಗೂ ಪೊಲೀಸರು ವಶಕ್ಕೆ ಪಡೆದಿರುವ ಮಾರಕಾಸ್ತ್ರಗಳು
ಬಂಧಿತರು ಹಾಗೂ ಪೊಲೀಸರು ವಶಕ್ಕೆ ಪಡೆದಿರುವ ಮಾರಕಾಸ್ತ್ರಗಳು   

ಬೆಂಗಳೂರು: ವಿರೋಧಿ ಬಣದಲ್ಲಿದ್ದ ರೌಡಿಶೀಟರ್ ಕೊಲೆಗೆ ಸಂಚು ರೂಪಿಸಿದ್ದ ಆರೋಪದಡಿ ರೌಡಿಶೀಟರ್‌ ಹಾಗೂ ಸಹಚರರು ಸೇರಿ ನಾಲ್ಕು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಾಡುಬೀಸನಹಳ್ಳಿಯ ಸೋಮ (40), ಒಡಗೆರೆ ಮುಖ್ಯರಸ್ತೆಯ ಮಧು (24), ಸರ್ಜಾಪುರದ ಸುಮಂತ ಕುಮಾರ್ (24) ಹಾಗೂ ವರ್ತೂರಿನ ಮುನಿಯಲ್ಲಪ್ಪ (33) ಬಂಧಿತರು.

‘ಎದುರಾಳಿ ಗುಂಪಿನಲ್ಲಿದ್ದ ಮಾರತ್ತಹಳ್ಳಿಯ ರೌಡಿಶೀಟರ್ ರೋಹಿತ್ ಎಂಬುವನ ಕೊಲೆಗೆ ಆರೋಪಿಗಳು ಸಂಚು ರೂಪಿಸಿದ್ದರು. ಈ ವಿಚಾರ ತಿಳಿದು ನಾಲ್ವರನ್ನೂ ಬಂಧಿಸಿ, ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ರೋಹಿತ್ ಹಾಗೂ ಬಂಧಿತ ಸೋಮನ ನಡುವೆ ಈ ಹಿಂದೆ ವೈರತ್ವ ಇತ್ತು. ಸೋಮನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ರೋಹಿತ್‌, ಮಂಗಳೂರಿನಿಂದ ಹುಡುಗರನ್ನು ಕರೆಸಿಕೊಂಡಿದ್ದ. ಈ ಬಗ್ಗೆ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು ರೋಹಿತ್‌ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದರು. ಇತ್ತೀಚೆಗಷ್ಟೇ ರೋಹಿತ್ ಜೈಲಿನಿಂದ ಬಿಡುಗಡೆಯಾಗಿದ್ದ’.

‘ರೋಹಿತ್‌ನನ್ನು ಕೊಲೆ ಮಾಡಲುಸೋಮ ತಂಡ ಕಟ್ಟಿದ್ದ.ವರ್ತೂರು ಠಾಣಾ ವ್ಯಾಪ್ತಿಯ ಕೆರೆಕೋಡಿ ಗಂಗಮ್ಮ ದೇವಸ್ಥಾನದ ಹತ್ತಿರ ರೋಹಿತ್ ಶನಿವಾರ ಬರುವುದನ್ನು ತಿಳಿದು ಕೊಲೆಗೆ ಮಾರಕಾಸ್ತ್ರಗಳೊಂದಿಗೆ ಸಜ್ಜಾಗಿದ್ದರು’ ಎಂದು ಪೊಲೀಸರು ವಿವರಿಸಿದರು.

ಬಂಧಿತ ಸೋಮ ಮಾರತ್ತಹಳ್ಳಿ ಠಾಣೆಯ ರೌಡಿಶೀಟರ್‌ ಆಗಿದ್ದು, ಜೋಡಿಕೊಲೆ, ಕೊಲೆ ಯತ್ನ, ಬೆದರಿಕೆ ಸೇರಿದಂತೆ ಒಂಬತ್ತು ಪ್ರಕರಣಗಳು ಈತನ ಮೇಲಿದೆ. ವರ್ತೂರು ಠಾಣೆಯ ರೌಡಿಶೀಟರ್ ಆಗಿರುವ ಮಧು ಮೇಲೂ ಹಲವು ಪ್ರಕರಣಗಳು ಹಾಗೂ ಮುನಿಯಲ್ಲಪ್ಪನ ವಿರುದ್ಧ ಒಂದು ಕೊಲೆಯತ್ನ ಪ್ರಕರಣ ದಾಖಲಾಗಿವೆ.

‘ಬಂಧಿತರು 14 ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು, ನಾಲ್ಕು ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.