ADVERTISEMENT

₹48 ಕೋಟಿ ವಂಚನೆ: ಇಬ್ಬರ ಸೆರೆ

ಕೃಷಿ ಮಾರಾಟ ಮಂಡಳಿ ಹಣ ವರ್ಗಾವಣೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 20:30 IST
Last Updated 10 ಫೆಬ್ರುವರಿ 2020, 20:30 IST

ಬೆಂಗಳೂರು: ರಾಜ್ಯ ಕೃಷಿ ಮಾರಾಟ ಮಂಡಳಿಯ ₹ 48 ಕೋಟಿ ನಿಶ್ಚಿತ ಠೇವಣಿ (ಎಫ್‌ಡಿ) ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ವಂಚಿಸಿದ ಪ್ರಕರಣ ಸಂಬಂಧ ಮತ್ತಿಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಸೋಮವಾರ ಬಂಧಿಸಿದ್ದು, ಈ ಮೂಲಕ ಬಂಧಿತರ ಸಂಖ್ಯೆ ಎಂಟಕ್ಕೇರಿದೆ.

ಮಂಡಳಿಯ ನಿವೃತ್ತ ಉಪ ನಿಯಂತ್ರಕ ಲಕ್ಷ್ಮಣ ಹಾಗೂ ಆಂಧ್ರ ಬ್ಯಾಂಕ್‌ನ ವ್ಯವಸ್ಥಾಪಕ ಸಿರಿಲ್ ಬಂಧಿತರು. ವಂಚನೆ ಸಂಬಂಧ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರಿಗೌಡ ಅವರು ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದರು.

‘ಪ್ರಕರಣ ಸಂಬಂಧ ಸಿಂಡಿಕೇಟ್ ಬ್ಯಾಂಕ್‌ನ ಉತ್ತರಹಳ್ಳಿ ಶಾಖೆಯ ಸಹಾಯಕ ವ್ಯವಸ್ಥಾಪಕ ಜಯರಾಮ್, ಮಂಡಳಿಯ ಮಾರುಕಟ್ಟೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ (ಡಿಜಿಎಂ) ಸಿದ್ದಗಂಗಯ್ಯ, ಭರತ್, ಮುಸ್ತಫಾ, ಮಹಮ್ಮದ್ ಅಸ್ಲಾಂ ಹಾಗೂ ರೇವಣ್ಣನನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು. ಇದೀಗ ಲಕ್ಷ್ಮಣ ಹಾಗೂ ಸಿರಿಲ್‌ ಅವರನ್ನು ಸೆರೆ ಹಿಡಿಯಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ADVERTISEMENT

‘ಆರೋಪಿ ಸಿರಿಲ್ ಅವರೇ ವಂಚನೆಯಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು. ಮಂಡಳಿಯ ಲೆಕ್ಕ ಪರಿಶೋಧನೆ ವಿಭಾಗದಲ್ಲಿದ್ದ ಲಕ್ಷ್ಮಣ ಅದಕ್ಕೆ ಸಹಕರಿಸಿದ್ದರು. ಉಳಿದೆಲ್ಲ ಆರೋಪಿಗಳು ಒಳಸಂಚು ನಡೆಸಿ ನಕಲಿ ದಾಖಲೆಗಳನ್ನು ಸಿದ್ಧಪಡಿಸಿ ಹಣವನ್ನು ವರ್ಗಾವಣೆ ಮಾಡಿಸಿದ್ದರು’ ಎಂದು ಮೂಲಗಳು ಹೇಳಿವೆ.

ಖಾತೆಗಳ ಮಾಹಿತಿ ಸಂಗ್ರಹ:‘ಆಂಧ್ರ ಬ್ಯಾಂಕ್‌ನ ರಾಜಾಜಿನಗರ ಶಾಖೆಯಲ್ಲಿರಾಜ್ಯ ಕೃಷಿ ಮಾರಾಟ ಮಂಡಳಿ ಆವರ್ತನಿಧಿ ಇದೆ. ಅದೇ ಖಾತೆಯಿಂದ ಆರ್‌ಟಿಜಿಎಸ್ ಮೂಲಕ ₹ 100 ಕೋಟಿ ಹಣವನ್ನು ಸಿಂಡಿಕೇಟ್ ಬ್ಯಾಂಕ್‌ ಉತ್ತರಹಳ್ಳಿ ಶಾಖೆಗೆ ವರ್ಗಾವಣೆ ಮಾಡಲಾಗಿತ್ತು. ತಲಾ ₹ 50 ಕೋಟಿಯಂತೆ ಎರಡು ನಿಶ್ಚಿತ ಠೇವಣಿಗಳನ್ನು ಇಡಲಾಗಿತ್ತು. ಒಂದು ಠೇವಣಿಯ ಹಣವನ್ನೇ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಆರೋಪಿಗಳು ವಂಚಿಸಿದ್ದಾರೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಚೆನ್ನೈ ಹಾಗೂ ಉತ್ತರ ಕರ್ನಾಟಕದ ಹಲವು ಬ್ಯಾಂಕ್‌ಗಳ ಖಾತೆಗಳಿಗೆ ಆರೋಪಿಗಳು ಹಣ ವರ್ಗಾವಣೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ. ಅಂಥ ಖಾತೆಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.