ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕುಲಸಚಿವ ಹುದ್ದೆ ಕೊಡಿಸುವುದಾಗಿ ಪ್ರಾಧ್ಯಾಪಕರೊಬ್ಬರಿಗೆ ಆಮಿಷವೊಡ್ಡಿ ಹಣ ಪಡೆದು ವಂಚಿಸಿ, ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದ ಆರೋಪದ ಅಡಿ ಆರೋಪಿ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿವೃತ್ತ ಪ್ರಾಧ್ಯಾಪಕ ಆರ್.ಕೆ.ಸೋಮಶೇಖರ್(67) ವಂಚನೆಗೆ ಒಳಗಾದವರು. ಸೋಮಶೇಖರ್ ಅವರು 2015ರಲ್ಲಿ ಆರೋಪಿಗೆ ಹಣ ನೀಡಿದ್ದರು ಎನ್ನಲಾಗಿದೆ. ಆಗ ಸೋಮಶೇಖರ್ ಅವರು ಕರ್ತವ್ಯದಲ್ಲಿ ಇದ್ದರು. ಆ ಸಂದರ್ಭದಲ್ಲಿ ಆರೋಪಿ ಆಮಿಷವೊಡ್ಡಿ ಹಣ ಪಡೆದುಕೊಂಡು ಮೋಸ ಮಾಡಿದ್ದಾನೆ. ಇತ್ತೀಚೆಗೆ ಸೋಮಶೇಖರ್ ಅವರು ಹಣ ವಾಪಸ್ ನೀಡುವಂತೆ ಹೇಳಿದ್ದಕ್ಕೆ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಸೋಮಶೇಖರ್ ಅವರು ದೂರು ನೀಡಿದ್ದು , ಹೊರಮಾವು ನಂದನಂ ಲೇಔಟ್ ನಿವಾಸಿ ಬಿ.ಜಿ.ರವಿಕುಮಾರ್ ಎಂಬಾತನ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಜೀವ ಬೆದರಿಕೆ ಸೇರಿ ವಿವಿಧ ಆರೋಪಗಳ ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
ದೂರುದಾರ ಸೋಮಶೇಖರ್ 1983ರಿಂದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ ಪರಿಸರ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ, 2019ನೇ ಸಾಲಿನಲ್ಲಿ ನಿವೃತ್ತರಾಗಿದ್ದಾರೆ. ಈ ನಡುವೆ 2010ರಲ್ಲಿ ಸ್ನೇಹಿತರೊಬ್ಬರ ಮೂಲಕ ಆರೋಪಿ ಬಿ.ಜಿ.ರವಿಕುಮಾರ್ ಪರಿಚಯವಾಗಿದ್ದ. ಬಳಿಕ ಇಬ್ಬರೂ ಸ್ನೇಹಿತರಾಗಿದ್ದರು ಎಂದು ಮೂಲಗಳು ಹೇಳಿವೆ.
‘ತನಗೆ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ. ವಿ.ವಿಯಲ್ಲಿ ಉನ್ನತ ಹುದ್ದೆ ಕೊಡಿಸುತ್ತೇನೆ ಎಂದು 2015ರಲ್ಲಿ ಆರೋಪಿ ರವಿಕುಮಾರ್ ಆಮಿಷವೊಡ್ಡಿದ್ದ. ಆತನ ಮಾತು ನಂಬಿದ್ದ ಸೋಮಶೇಖರ್ ಅವರು ತನಗೆ ಕುಲಸಚಿವ ಹುದ್ದೆ ಕೊಡಿಸುವಂತೆ ಕೇಳಿದ್ದರು. ಅದಕ್ಕೆ₹ 50 ಲಕ್ಷ ಖರ್ಚಾಗಲಿದೆ ಎಂದು ಆರೋಪಿ ಹೇಳಿದ್ದ. ಬಳಿಕ ಇಬ್ಬರೂ ಮಾತುಕತೆ ನಡೆಸಿ ಅಂತಿಮವಾಗಿ ₹35 ಲಕ್ಷ ಒಪ್ಪಂದ ಆಗಿತ್ತು. ಹುದ್ದೆ ಸಿಗದೇ ಇದ್ದರೆ ಹಣ ವಾಪಸ್ ಕೊಡುವುದಾಗಿ ಭರವಸೆ ನೀಡಿದ್ದ’ ಎಂದು ಮೂಲಗಳು ತಿಳಿಸಿವೆ.
‘ಆರೋಪಿಯ ಮಾತು ನಂಬಿದ್ದ ಸೋಮಶೇಖರ್ ಅವರು ಹಂತಹಂತವಾಗಿ ₹35 ಲಕ್ಷ ನೀಡಿದ್ದರು. ಆರು ತಿಂಗಳೊಳಗೆ ಕೆಲಸ ಆಗಲಿದೆ ಎಂದು ರವಿಕುಮಾರ್ ಹೇಳಿದ್ದ. ಈ ವಿಷಯವನ್ನು ಯಾರೊಬ್ಬರ ಬಳಿಯೂ ಹೇಳದಂತೆ ಸೂಚಿಸಿದ್ದ. ಸೋಮಶೇಖರ್ ಅವರು ಪದೇ ಪದೇ ಹುದ್ದೆಯ ಬಗ್ಗೆ ವಿಚಾರಿಸುತ್ತಿದ್ದರು. ನೆಪ ಹೇಳಿಕೊಂಡು ದಿನ ದೂಡುತ್ತಿದ್ದ. ಅಷ್ಟರಲ್ಲಿ ಸೋಮಶೇಖರ್ ಸೇವೆಯಿಂದ ನಿವೃತ್ತರಾಗಿದ್ದರು. ಬಳಿಕ ತಾನು ಸೇವೆಯಿಂದ ನಿವೃತ್ತನಾಗಿದ್ದು, ತಮ್ಮ ಹಣ ವಾಪಸ್ ನೀಡುವಂತೆ ಕೇಳಿದ್ದರು. ಒಂದು ವರ್ಷದ ಸಮಯ ಕೊಡಿ ಎಂದು ರವಿಕುಮಾರ್ ಹೇಳಿದ್ದ. 2024ರ ಡಿಸೆಂಬರ್‌ನಲ್ಲಿ ಕರೆ ಮಾಡಿ ಹಣ ವಾಪಸ್ ಕೇಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಆರೋಪಿ ರವಿಕುಮಾರ್ ಸೂಚನೆ ಮೇರೆಗೆ ಸೋಮಶೇಖರ್ ಕಳೆದ ಮಾರ್ಚ್ 9ರಂದು ವಿಜಯನಗರ ಸರ್ವೀಸ್ ರಸ್ತೆಯ ಇಂದ್ರಪ್ರಸ್ಥ ಹೋಟೆಲ್ ಬಳಿಗೆ ತೆರಳಿದ್ದರು. ಈ ವೇಳೆ ರವಿಕುಮಾರ್, ಸೋಮಶೇಖರ್ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಚಾಕು ತೆಗೆದು ಕುತ್ತಿಗೆ ಹಿಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.