ADVERTISEMENT

ಗೃಹ ಸಚಿವರ ಆಪ್ತನೆಂದು ಹೇಳಿ ವಂಚನೆ: ತುಮಕೂರಿನ ಕೊರಟೆಗೆರೆ ನಿವಾಸಿ ಬಂಧನ

ತುಮಕೂರಿನ ಕೊರಟೆಗೆರೆ ನಿವಾಸಿ ಬಂಧಿಸಿದ ಕೆಂಗೇರಿ ಪೊಲೀಸರು

​ಪ್ರಜಾವಾಣಿ ವಾರ್ತೆ
Published 16 ಮೇ 2024, 15:43 IST
Last Updated 16 ಮೇ 2024, 15:43 IST
ಮಹಮದ್ ಜುಬೇರ್
ಮಹಮದ್ ಜುಬೇರ್   

ಬೆಂಗಳೂರು/ಕೊರಟಗೆರೆ: ಮೆಡಿಕಲ್‌ ಸೀಟು, ಕಡಿಮೆ ದರಕ್ಕೆ ನಿವೇಶನ, ಬ್ಯಾಂಕ್‌ನಿಂದ ಕೋಟ್ಯಂತರ ರೂಪಾಯಿ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸುತ್ತಿದ್ದ ತುಮಕೂರು ಜಿಲ್ಲೆಯ ಕೊರಟೆಗೆರೆಯ ಮಹಮ್ಮದ್‌ ಜುಬೇರ್‌ (30) ಎಂಬಾತನನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

ಕೆಂಗೇರಿಯ ಸಾಯಿದ ತಬಸುಂ ಎಂಬುವರಿಗೆ ₹1.20 ಕೋಟಿ ಹಾಗೂ 186 ಗ್ರಾಂ ಚಿನ್ನ ವಂಚನೆ ಮಾಡಿದ್ದ ಸಂಬಂಧ ದಾಖಲಾಗಿದ್ದ ದೂರಿನ ತನಿಖೆ ಕೈಗೊಂಡಿದ್ದ ಕೆಂಗೇರಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.

‘ಸದ್ಯಕ್ಕೆ ಆರೋಪಿ ವಂಚಿಸಿದ್ದ ₹80 ಲಕ್ಷ ಹಣದ್ದು ಮಾಹಿತಿ ಸಿಕ್ಕಿದೆ. ಉಳಿಕೆ ಹಣವನ್ನು ಎಲ್ಲಿ ಹೂಡಿಕೆ ಮಾಡಿದ್ದ ಎಂಬುದನ್ನು ಪತ್ತೆ ಮಾಡಲು ತನಿಖೆ ಮುಂದುವರಿಸಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನಾಲ್ಕು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ತುಮಕೂರು ಭಾಗದಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಅವರ ಆಪ್ತನೆಂದು ಹೇಳಿಕೊಂಡು ಓಡಾಡುತ್ತಿದ್ದ. ಅಲ್ಲದೇ ವಿವಿಧ ಇಲಾಖೆ ಅಧಿಕಾರಿಗಳ ಮೊಹರು ನಕಲು ಮಾಡಿ ವಂಚಿಸುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ಗೃಹ ಸಚಿವರ ಜೊತೆಗಿದ್ದ ಫೋಟೊ ಹಾಗೂ ವಿಡಿಯೊ ತೋರಿಸಿ ಸಾರ್ವಜನಿಕರನ್ನು ನಂಬಿಸುತ್ತಿದ್ದ. ಅಧಿಕಾರಿಗಳ ನಕಲಿ ಲೆಟರ್‌ ಹೆಡ್‌ ಬಳಕೆ ಮಾಡುತ್ತಿದ್ದನೆಂದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಕೆಂಗೇರಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿ ವಿರುದ್ಧ 14 ದೂರು ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರು, ತುಮಕೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಸಾರ್ವಜನಿಕರನ್ನು ವಂಚಿಸಿದ್ದಾನೆ. ವಂಚನೆ ಮಾಡಿದ್ದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ. ಇಟ್ಟಿಗೆ ಫ್ಯಾಕ್ಟರಿಗಳಿಗೆ ಅಕ್ರಮವಾಗಿ ಮಣ್ಣು ಪೂರೈಕೆ ಮಾಡುತ್ತಿದ್ದ’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.