ಬೆಂಗಳೂರು: ತಾನೊಬ್ಬ ಐಪಿಎಸ್ ಅಧಿಕಾರಿ ಎಂದು ಹೇಳಿ ವ್ಯಾಪಾರಿಯೊಬ್ಬರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಭರತ್‌ಕುಮಾರ್ ಅಲಿಯಾಸ್ ಐಪಿಎಸ್ ಭರತ್ (48) ಹಾಗೂ ಆತನ ಸಹಚರ ಕಿಶನ್ ಅಲಿಯಾಸ್ ಆನಂದ್ (32) ಎಂಬಾತನನ್ನು ಎಸ್.ಜೆ. ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.
‘ಎನ್.ಆರ್. ಕಾಲೊನಿ ನಿವಾಸಿಯಾದ ಭರತ್ ಹಾಗೂ ಕಿಶನ್ ವಿರುದ್ಧ ವಿ.ವಿ.ಪುರ ನಿವಾಸಿ ಶ್ರವಣ್‌ಕುಮಾರ್ ಎಂಬುವರು ಡಿ. 6ರಂದು ದೂರು ನೀಡಿದ್ದರು. ಅದರನ್ವಯ ಆರೋಪಿಗಳನ್ನು ಬಂಧಿಸಲಾಗಿದ್ದು, ಸದ್ಯ ಅವರಿಬ್ಬರು ನ್ಯಾಯಾಂಗ ಬಂಧನದಲ್ಲಿದ್ದಾರೆ’ ಎಂದು ಹೇಳಿದರು.
‘ಐಪಿಎಸ್ ಭರತ್’ ಎಂಬ ಗುರುತಿನ ಚೀಟಿ ಇಟ್ಟುಕೊಂಡು ಓಡಾಡುತ್ತಿದ್ದ ಆರೋಪಿ, ವ್ಯಾಪಾರಸ್ಥರು ಹಾಗೂ ಉದ್ಯಮಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ. ಒಬ್ಬರು ಮಾತ್ರ ಈಗ ದೂರು ನೀಡಿದ್ದಾರೆ. ಉಳಿದವರಿಂದ ಹೇಳಿಕೆ ಪಡೆಯಬೇಕಿದೆ’ ಎಂದು ತಿಳಿಸಿದರು.
ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿಯೆಂದು ಬೆದರಿಕೆ; ‘ದೂರುದಾರ ಶ್ರವಣ್‌ಕುಮಾರ್ ಅವರು ಎಸ್.ಜೆ. ಪಾರ್ಕ್ ಠಾಣೆ ವ್ಯಾಪ್ತಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದಾರೆ. ಅವರಿಗೆ ನ. 19ರಂದು ಕರೆ ಮಾಡಿದ್ದ ಭರತ್, ‘ನಾನೊಬ್ಬ ಐಪಿಎಸ್ ಅಧಿಕಾರಿ. ನೀನು ಕ್ರಿಕೆಟ್ ಬೆಟ್ಟಿಂಗ್ ಬುಕ್ಕಿ ಎಂಬುದು ಗೊತ್ತಾಗಿದೆ. ನಿನ್ನನ್ನು ಸದ್ಯದಲ್ಲೇ ಬಂಧಿಸುತ್ತೇವೆ. ಆ ರೀತಿ ಮಾಡಬಾರದೆಂದರೆ ₹ 1 ಲಕ್ಷ ಕೊಡಬೇಕು’ ಎಂಬುದಾಗಿ ಬೇಡಿಕೆ ಇಟ್ಟಿದ್ದ’ ಎಂದು ಪೊಲೀಸರು ತಿಳಿಸಿದರು.
‘ಅಂಗಡಿಗೆ ಬಂದು ಭೇಟಿಯಾಗುವಂತೆ ಶ್ರವಣ್‌ಕುಮಾರ್ ಹೇಳಿದ್ದರು. ಅದಾದ ಬಳಿಕವೂ ಆರೋಪಿ ಹಲವು ಬಾರಿ ಕರೆ ಮಾಡಿ ಬೆದರಿಸಿದ್ದ. ಡಿ. 2ರಂದು ಅಂಗಡಿಗೆ ಬಂದಿದ್ದ ಆರೋಪಿ, ಹಣ ನೀಡುವಂತೆ ಒತ್ತಾಯಿಸಿದ್ದ. ಅದಕ್ಕೆ ಶ್ರವಣ್‌ಕುಮಾರ್ ಒಪ್ಪಿರಲಿಲ್ಲ. ₹ 80 ಸಾವಿರವನ್ನಾದರೂ ಕೊಡುವಂತೆ ಆರೋಪಿ ಪೀಡಿಸಲಾರಂಭಿಸಿದ್ದ. ಅದಕ್ಕೂ ದೂರುದಾರರು ಒಪ್ಪದಿದ್ದಾಗ ಆತ ವಾಪಸು ಹೋಗಿದ್ದ.’
‘ದೂರುದಾರರನ್ನು ಹಿಂಬಾಲಿಸಲಾರಂಭಿಸಿದ್ದ ಆರೋಪಿ, ಸಹಚರ ಕಿಶನ್ ಜೊತೆಯಲ್ಲಿ ಶುಕ್ರವಾರ ಅಂಗಡಿಗೆ ಬಂದಿದ್ದ. ಆಗಲೂ ಜಗಳ ತೆಗೆದು ಹಣ ಕೇಳಿದ್ದ. ಆತನ ಕಿರುಕುಳದಿಂದ ಬೇಸತ್ತ ಶ್ರವಣ್‌ಕುಮಾರ್ ಠಾಣೆಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.